ಬೆಂಗಳೂರು: ನಟಿ ರನ್ಯಾ ರಾವ್ ಅವರು ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ಚಿನ್ನವನ್ನು ದುಬೈನಿಂದ ಬೆಂಗಳೂರಿಗೆ ತರುವಾಗ ಅವರನ್ನು ವಿಮಾನ ನಿಲ್ದಾಣದಲ್ಲೇ ತಡೆ ಹಿಡಿಯಲಾಗಿದೆ.
ರನ್ಯಾ ಅವರ ಪ್ರಕರಣದಲ್ಲಿ ಪೊಲೀಸ್ ಪ್ರೊಟೋಕಾಲ್ ಉಲ್ಲಂಘನೆ ಆಗಿದೆ ಎಂದು ವರದಿ ಆಗಿತ್ತು. ಈ ಸಂಬಂಧ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿತ್ತು. ಆದರೆ 24 ಗಂಟೆಯಲ್ಲಿ ಹಿಂಪಡೆಯಲಾಗಿದೆ. ಈ ಕುರಿತು ರಾಜ್ಯ ಗೃಹಸಚಿವ ಜಿ. ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಪರಮೇಶ್ವರ್, ‘ಪೊಲೀಸ್ ಪ್ರೊಟೊಕಾಲ್ ಉಲ್ಲಂಘನೆ ಬಗ್ಗೆ ತಿಳಿದುಕೊಳ್ಳಲು ನಾನು ಸಿಐಡಿ ತನಿಖೆಗೆ ಆದೇಶಿಸಿದೆ. ಅಷ್ಟರೊಳಗಾಗಲೇ ಸಿಎಂ ಕಚೇರಿಯಿಂದ ಮೇಲ್ಮಟ್ಟದ ತನಿಖೆಗೆ ಆದೇಶ ನೀಡಲಾಗಿತ್ತು. ಒಂದೇ ವಿಚಾರಕ್ಕೆ ಎರಡು ಕಡೆ ತನಿಖೆ ಆಗೋದು ಬೇಡ ಎಂಬ ಕಾರಣಕ್ಕೆ ನಾವು ಸಿಐಡಿ ತನಿಖೆಯನ್ನು ಹಿಂಪಡೆದೆವು ಎಂದು ಹೇಳಿದ್ದಾರೆ.
ತನಿಖೆಗೆ ಆದೇಶ ನೀಡಲೂ ಯಾರು ಒತ್ತಡ ಹೇರಿರಲಿಲ್ಲ. ಹಿಂದಕ್ಕೆ ಪಡೆಯಲೂ ಯಾರೂ ಒತ್ತಡ ಹೇರಿಲ್ಲ. ಎರಡು ತನಿಖೆ ಬೇಡ ಎಂಬ ಕಾರಣಕ್ಕೆ ನಾವು ಹಿಂಪಡೆದಿದ್ದೇವೆ ಅಷ್ಟೇ. ಇಲ್ಲಿ ಯಾವುದೇ ಗೊಂದಲ ಬೇಡ ಎಂದು ಪರಮೇಶ್ವರ್ ಹೇಳಿದ್ದಾರೆ.