ಮನೆ ರಾಜ್ಯ 1,032 ಔಷಧಿಗಳ ಉಚಿತ ಪೂರೈಕೆ : ಸಚಿವ ದಿನೇಶ್ ಗುಂಡೂರಾವ್

1,032 ಔಷಧಿಗಳ ಉಚಿತ ಪೂರೈಕೆ : ಸಚಿವ ದಿನೇಶ್ ಗುಂಡೂರಾವ್

0

ಬೆಂಗಳೂರು : ರಾಜ್ಯದ ಜನರಿಗೆ ಉತ್ತಮ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ೧,೦೩೨ ಔಷಧಿಗಳನ್ನು ಖರೀದಿಸಿ ಉಚಿತವಾಗಿ ಪೂರೈಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಗುರುವಾರ ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಬಿಜೆಪಿ ಸದಸ್ಯ ಡಾ.ಸಿ.ಎನ್.ಅಶ್ವತ್ಥನಾರಾಯಣ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಆರೋಗ್ಯ ಇಲಾಖೆಯಲ್ಲಿ ಜೀವನಾವಶ್ಯಕ ಮತ್ತು ಅಪೇಕ್ಷಣೀಯ ಎಂಬ ೨ ವಿಧಗಳಲ್ಲಿ ಔಷಧಿಗಳನ್ನು ಖರೀದಿಸಲಾಗುತ್ತಿದೆ. ಜೀವನಾವಶ್ಯಕವಾದ ೪೦೮ ಮಾದರಿಯ ಔಷಧಿಗಳ ಪೈಕಿ ೨೬೨ ಖರೀದಿಗೆ ಅಪೇಕ್ಷಣೀಯ ೩೨೪ ಔಷಧಿಗಳ ಪೈಕಿ ೨೧೩ ಔಷಧಿಗಳ ಖರೀದಿಗೆ ಅನುಮತಿ ನೀಡಲಾಗಿದ್ದು, ಒಟ್ಟು ೪೭೫ ಔಷಧಿಗಳನ್ನು ಖರೀದಿಸಲಾಗುತ್ತಿದೆ. ಜಿಲ್ಲಾಮಟ್ಟದಲ್ಲಿ ೩೪೪ ಔಷಧಿಗಳ ದಾಸ್ತಾನಿದೆ ಎಂದರು.

ಕೆಲವು ಔಷಧಿಗಳನ್ನು ಖರೀದಿಸಲು ಟೆಂಡರ್ ಕರೆದರೆ ಗುತ್ತಿಗೆದಾರರು ಔಷಧಿ ಪೂರೈಸಲು ಮುಂದೆ ಬರುತ್ತಿಲ್ಲ. ಬೆಲೆ ಕಡಿಮೆ ಎಂಬ ಕಾರಣಕ್ಕಾಗಿ ಹಿಂದೇಟು ಹಾಕುತ್ತಿದ್ದಾರೆ. ಕೆಳಹಂತದಲ್ಲಿ ಎಆರ್‌ಕೆ, ಎಬಿಆರ್‌ಎಸ್ ಮಾದರಿಗಳಲ್ಲಿ ಔಷಧಿ ಖರೀದಿಗೆ ಸಾಕಷ್ಟು ಅನುದಾನ ಒದಗಿಸಲಾಗಿದೆ. ಕೇಂದ್ರ ಸರಕಾರದ ಅನುದಾನದಲ್ಲಿ ಶೇ.೮೦ ರಷ್ಟನ್ನು ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ಸಂಸ್ಥೆಗೆ ಹಂಚಿಕೆಯಾಗುತ್ತಿದ್ದು, ಶೇ.೨೦ ರಷ್ಟನ್ನು ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ನೀಡಿ ಎಬಿಎಆರ್‌ಕೆ, ಎಆರ್‌ಎಸ್, ಎನ್‌ಎಫ್‌ಡಿಎಸ್ ಮತ್ತು ೧೫ನೇ ಹಣಕಾಸು ಯೋಜನೆಯಡಿ ಬಳಕೆ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದರು.

ಈವರೆಗೂ ೭೩೨ ಔಷಧಿಗಳ ಖರೀದಿಗೆ ಮಾತ್ರ ಅವಕಾಶ ಇತ್ತು. ಅದನ್ನು ೧,೦೩೨ ಕ್ಕೆ ಹೆಚ್ಚಳ ಮಾಡಲಾಗುತ್ತಿದೆ. ಕಾಲಕಾಲಕ್ಕೆ ಔಷಧಿಗಳ ಬೇಡಿಕೆ ಆಧರಿಸಿ ಮಾದರಿಗಳನ್ನು ಬದಲಾವಣೆ ಮಾಡಲಾಗುವುದು. ಶೀಘ್ರವೇ ಔಷಧಿ ಖರೀದಿಸಿ ಆಸ್ಪತ್ರೆಗಳಿಗೆ ಪೂರೈಸುವ ಮೂಲಕ ಸರಕಾರ ತನ್ನ ಮೂಲಭೂತ ಕರ್ತವ್ಯಕ್ಕೆ ಬದ್ಧವಾಗಿರಲಿದೆ ಎಂದರು.

ನಕಲಿ ಔಷಧಿ ವಿಭಾಗದಲ್ಲಿ ೪ ವಿಧಗಳಿವೆ. ತಪ್ಪಾಗಿ ಹೆಸರನ್ನು ನಮೂದಿಸುವುದು ಒಂದು ವಿಧವಾದರೆ, ಉತ್ಪಾದಕರು ಬೇರೆ, ಔಷಧಿಗಳಿಗೆ ಅಂಟಿಸುವ ಲೇಬಲ್‌ನಲ್ಲಿ ಬೇರೆ ಹೆಸರಿರುವುದು, ಲೇಬಲ್‌ಗಳಲ್ಲಿನ ತಪ್ಪು ಮಾಹಿತಿ ಹಾಗೂ ಔಷಧಿ ಗುಣಮಟ್ಟ ಆಧರಿಸಿ ಬೇರೆಬೇರೆ ರೀತಿಯ ವಿಧಗಳಿವೆ. ರಾಜ್ಯಸರ್ಕಾರ ಈವರೆಗಿನ ಇತಿಹಾಸದಲ್ಲೇ ಅತಿ ಹೆಚ್ಚು ತಪಾಸಣೆಗಳನ್ನು ಕೈಗೊಂಡಿದೆ ಎಂದು ಉಲ್ಲೇಖಿಸಿದರು.

ಇದು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ೬೭ ಔಷಧಿ ಪರಿವೀಕ್ಷಕರ ನೇಮಕಾತಿಗಾಗಿ ಕ್ರಮ ಕೈಗೊಳ್ಳಲಾಗಿದ್ದು, ನ್ಯಾಯಾಲಯದಲ್ಲಿ ತಗಾದೆ ಇತ್ಯರ್ಥವಾದ ತಕ್ಷಣ ನೇಮಕಾತಿ ಆದೇಶ ನೀಡುವುದಾಗಿ ತಿಳಿಸಿದ ಅವರು, ನಕಲಿ ಔಷಧಿ ವಿಚಾರಕ್ಕೆ ಸಂಬಂಧಪಟ್ಟಂತೆ ೮೭ ಫಾರ್ಮಸಿ ಅಂಗಡಿಗಳ ಪರವಾನಗಿ ಅಮಾನತುಗೊಳಿಸಲಾಗಿದೆ, ೩ ಪರವಾನಗಿಗಳನ್ನು ರದ್ದುಗೊಳಿಸಲಾಗಿದೆ. ಕೆಎಸ್‌ಎಂಎಸ್‌ಸಿಎಲ್‌ಗೆ ಐಎಎಸ್ ಅಧಿಕಾರಿಯನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸುವ ಮೂಲಕ ಸಾಕಷ್ಟು ಸುಧಾರಣೆ ತರಲಾಗುತ್ತಿದೆ ಎಂದು ವಿವರಿಸಿದರು.