ಮನೆ ರಾಜ್ಯ ಕೆಪಿಎಸ್‌ಸಿ ಭಾಷಾಂತರಕಾರ ಕಪ್ಪು ಪಟ್ಟಿಗೆ

ಕೆಪಿಎಸ್‌ಸಿ ಭಾಷಾಂತರಕಾರ ಕಪ್ಪು ಪಟ್ಟಿಗೆ

0

ಬೆಂಗಳೂರು: ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳ ಭರ್ತಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ನಡೆಸಿದ ಪ್ರಾಥಮಿಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳ ಭಾಷಾಂತರದಲ್ಲಿ ಲೋಪ ಎಸಗಿರುವವರನ್ನು ಕಪ್ಪುಪಟ್ಟಿಗೆ ಸೇರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಕೆಪಿಎಸ್‌ಸಿ ಪರೀಕ್ಷಾ ಲೋಪ ಮತ್ತು ಭ್ರಷ್ಟಾಚಾರದ ಕುರಿತು ನಡೆದ ಚರ್ಚೆಗೆ ವಿಧಾನಸಭೆಯಲ್ಲಿ ಉತ್ತರ ನೀಡಿದ ಅವರು, ಎರಡು ಬಾರಿ ನಡೆದ ಪ್ರಾಥಮಿಕ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಕನ್ನಡಕ್ಕೆ ಭಾಷಾಂತರಿಸುವಾಗ ಲೋಪಗಳಾಗಿವೆ. ಈ ವಿಷಯವನ್ನು ನಮ್ಮ ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ ಎಂದು ಹೇಳಿದರು.

೩೮೪ ಗೆಜೆಟೆಡ್ ಪ್ರೊಬೆಷನರ್ ಹುದ್ದೆಗಳಿಗೆ ಮೊದಲ ಬಾರಿ ನಡೆದ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ/ಉತ್ತರ ಪತ್ರಿಕೆಯಲ್ಲಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರಿಸುವಲ್ಲಿ ಲೋಪ ಕಂಡುಬಂದಿತ್ತು. ಇದನ್ನು ಪರಿಶೀಲಿಸಲು ಆಯೋಗವು ತಜ್ಞರ ಸಮಿತಿ ರಚಿಸಿತ್ತು. ೧೦ ಕಡೆ ದೋಷ ಇರುವುದನ್ನು ಪತ್ತೆ ಹಚ್ಚಿತ್ತು. ಮರುಪರೀಕ್ಷೆಗೂ ಶಿಫಾರಸು ಮಾಡಿತ್ತು. ೨ನೇ ಬಾರಿಗೆ ಪರೀಕ್ಷೆ ಮಾಡಿದಾಗಲೂ ಅದೇ ದೂರು ಕೇಳಿಬಂದಿದ್ದು, ಮತ್ತೆ ೬ ದೋಷಗಳು ಪತ್ತೆಯಾಗಿರುವುದಾಗಿ ಹೇಳಿದ್ದ ತಜ್ಞರ ಸಮಿತಿಯು ಕೃಪಾಂಕ ನೀಡಿ ಮುಖ್ಯಪರೀಕ್ಷೆಗೆ ಅನುವು ಮಾಡಿಕೊಟ್ಟಿತ್ತು.

ಪೂರ್ವಭಾವಿ ಪರೀಕ್ಷೆಯಲ್ಲಿ ಲೋಪದೋಷಗಳಾಗಿದ್ದ ಹಿನ್ನೆಲೆಯಲ್ಲಿ ಕೃಪಾಂಕ ನೀಡಿ ಮುಖ್ಯ ಪರೀಕ್ಷೆಗೆ ಆಯೋಗ ಮುಂದಾಗಿತ್ತಲ್ಲದೆ ಈ ಸಂಬಂಧ ಅಧಿಸೂಚನೆಯನ್ನೂ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಮೆಟ್ಟಿಲೇರಿದ್ದಾರೆ. ಮಾ. ೧೩ರಂದು ಮತ್ತೂಮ್ಮೆ ಅರ್ಜಿ ವಿಚಾರಣೆಗೆ ಬರಲಿದೆ. ಸದ್ಯಕ್ಕೆ ಮುಖ್ಯ ಪರೀಕ್ಷೆ ನಡೆಸುವ ವಿಚಾರ ನ್ಯಾಯಮಂಡಳಿ ಮುಂದೆ ಇರುವುದರಿಂದ ಯಾವುದೇ ನಿರ್ಣಯ ಕೈಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ಕೆಪಿಎಸ್‌ಸಿ ರೋಗಗ್ರಸ್ತ ಆಗಿದೆ ಎಂಬ ವಿಪಕ್ಷ ನಾಯಕರ ಆರೋಪವನ್ನು ನಾನು ಅಲ್ಲಗಳೆಯುವುದಿಲ್ಲ. ದಕ್ಷತೆ, ಪ್ರಾಮಾಣಿಕತೆ ಇರುವವರು ಆಯ್ಕೆಯಾಗಬೇಕು. ಭ್ರಷ್ಟಾಚಾರ ಎಂಬುದು ಆಯೋಗದಿಂದ ಹೊರಹೋಗಬೇಕು. ಈ ಹಿಂದೆ ಯುಪಿಎಸ್ಸಿ ಅಧ್ಯಕ್ಷರಾಗಿದ್ದ ಪಿ.ಸಿ. ಹೋಟಾ ಅವರ ಅಧ್ಯಕ್ಷತೆಯಲ್ಲಿ ಕೆಪಿಎಸ್ಸಿ ಸುಧಾರಣೆಗಾಗಿ ಸಮಿತಿ ರಚಿಸಿ, ಅದರ ಬಹುತೇಕ ಶಿಫಾರಸುಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ. ಈಗಲೂ ಯುಪಿಎಸ್ಸಿ ಮಾದರಿಯಲ್ಲಿ ಪರೀಕ್ಷೆ ನಡೆಸುವ ಚಿಂತನೆ ಇದೆ.

ಕೆಪಿಎಸ್‌ಸಿ ನಿಯಮಾವಳಿಗಳಲ್ಲಿ ಕೆಲ ಬದಲಾವಣೆ ಮಾಡುತ್ತಿದ್ದೇವೆ. ಕಾಯ್ದೆಯಲ್ಲಿ ತಿದ್ದುಪಡಿ ತರ್ತಿದ್ದೇವೆ. ಸದ್ಯ ಕೆಇಟಿಯಲ್ಲಿ ಇರುವ ಪ್ರಕರಣದ ತೀರ್ಪು ಬರಬೇಕು. ಮೊದಲು ಕನ್ನಡದಲ್ಲೇ ಪ್ರಶ್ನೆಪತ್ರಿಕೆ ತಯಾರು ಮಾಡಲಿ, ನಂತರ ಇಂಗ್ಲಿಷ್‌ಗೆ ತರ್ಜುಮೆ ಮಾಡಿ ಅಂತ ಕೆಪಿಎಸ್‌ಸಿಗೆ ಹೇಳಿದ್ದೇವೆ, ಮೊದಲು ಕನ್ನಡದಲ್ಲಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲು ಹೇಳುತ್ತೇವೆ, ನಂತರ ಇಂಗ್ಲಿಷ್‌ಗೆ ಭಾಷಾಂತರ ಮಾಡಿ ಅಂತ ಕೆಪಿಎಸ್‌ಸಿಗೆ ಸೂಚನೆ ಕೊಡ್ತೇವೆ. ಕೆಪಿಎಸ್‌ಸಿ ಸುಧಾರಣೆ ಆಗಬೇಕು. ಇದಕ್ಕೆ ವಿಪಕ್ಷಗಳು ಸಲಹೆ ಕೊಡಲಿ, ಸ್ವೀಕರಿಸುತ್ತೇವೆ ಎಂದರು.

ಬಳಿಕ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಶಾಸಕರ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣವಿಲ್ಲದಿದ್ದಾಗ ಕೆಪಿಎಸ್‌ಸಿ ಪರೀಕ್ಷೆಗಳನ್ನು ನಡೆಸಲಾಗಿತ್ತು. ತಪ್ಪಿತಸ್ಥ ಅಧಿಕಾರಿಗಳಿಗೆ ಸರ್ಕಾರ ೩೦ ಕೋಟಿ ರೂ. ಖರ್ಚು ಮಾಡಿದೆ. ಅಧಿಕಾರಿಗಳು ಮಾಡಿದ ತಪ್ಪುಗಳಿಂದಾಗಿ ಅನೇಕ ಅಭ್ಯರ್ಥಿಗಳು ಈಗ ತೊಂದರೆ ಅನುಭವಿಸಬೇಕಾಗಿದೆ. ಕೆಪಿಎಸ್‌ಸಿ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ ೭೯ ತಪ್ಪುಗಳನ್ನು ಮಾಡಲಾಗಿದೆ. ಆದರೆ ತಜ್ಞರ ಸಮಿತಿ ೩ ತಪ್ಪು ಆಗಿದೆ ಎಂದು ವರದಿ ಕೊಟ್ಟಿದೆ. ಆದರೆ ೫ ಕ್ಕೆ ಗ್ರೇಸಿಂಗ್ ಮಾರ್ಕ್ಸ್ ಕೊಡಲಾಗಿದೆ. ಈ ನಿಟ್ಟಿನಲ್ಲಿ ಕೆಪಿಸಿಸಿ ಪರೀಕ್ಷೆ ಅವಾಂತರವನ್ನು ಸರಿಪಡಿಸುವ ನಿಟ್ಟಿನಲ್ಲಿ ಮರು ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.