ಮನೆ Uncategorized ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿಮಹಿಳಾ ಸಬಲೀಕರಣ ಸಾಧ್ಯವಾಗಿದೆ

ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿಮಹಿಳಾ ಸಬಲೀಕರಣ ಸಾಧ್ಯವಾಗಿದೆ

0

ಮೈಸೂರು: ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರ ಸಬಲೀಕರಣ ಆಗುತ್ತಿದೆ. ಅದನ್ನ ಪ್ರಶ್ನೆ ಮಾಡುವ ಅಧಿಕಾರ ವಿಪಕ್ಷಗಳಿಗಿಲ್ಲ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಹೇಳಿದರು.

ಕೇಂದ್ರ ಕಾರಾಗೃಹದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಒಳ್ಳೆ ಕೆಲಸ ಸರ್ಕಾರ ಮಾಡುತ್ತಿದೆ. ಗ್ಯಾರಂಟಿಗಳಿಂದ ಒಬ್ಬ ಹೆಣ್ಣು ಮಗಳಿಗೆ ತಿಂಗಳಿಗೆ ನಾಲ್ಕೈದು ಸಾವಿರ ಉಳಿತಾಯ ಆಗುತ್ತದೆ. ಟೀಕೆ ಮಾಡೋದು ತಪ್ಪು ಎಂದರು.

ಅಮಾನವೀಯ ಕೃತ್ಯ: ಕೊಪ್ಪಳದಲ್ಲಿ ವಿದೇಶಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ವಿಚಾರವಾಗಿ ಪ್ರತಿಕ್ರಿಯಿಸಿ, ಇದೊಂದು ಅಮಾನವೀಯ ಕೃತ್ಯ. ಈಗಾಗಲೇ ಅಲ್ಲಿನ ಎಸ್ಪಿಗೆ ಪತ್ರ ಬರೆದಿದ್ದೇನೆ. ಹಂಪಿಯನ್ನ ನೋಡಲು ಸಾಕಷ್ಟು ವಿದೇಶಿಗರು ಅಲ್ಲಿಗೆ ಬರುತ್ತಾರೆ. ಅಂತವರ ಮೇಲೆ ಹೇಯ ಕೃತ್ಯ ನಡೆಸಿದರೆ ಯಾವ ಸಂದೇಶ ಹೋಗುತ್ತದೆ. ಇದೊಂದು ತಲೆ ತಗ್ಗಿಸುವ ಪರಿಸ್ಥಿತಿ ಇದು ಎಂದು ಹೇಳಿದರು. ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಜೊತೆಗೆ ಅಲ್ಲಿರುವ ಅನಧಿಕೃತ ಹೋಮ್ ಸ್ಟೇ, ರೆಸಾರ್ಟ್ಗಳನ್ನ ಬಂದ್ ಮಾಡಬೇಕು. ಅಲ್ಲಿಗೆ ಬರುವಂತ ವಿದೇಶಿಗರಿಗೆ ಹೆಚ್ಚಿನ ಭದ್ರತೆ ಕೊಡಬೇಕು ಎಂದು ತಿಳಿಸಿದರು.

ಸೌಜನ್ಯ ಕುಟುಂಬ ಭೇಟಿ ಮಾಡುವೆ: ಸೌಜನ್ಯ ಕೊಲೆ ಪ್ರಕರಣ ಮತ್ತೆ ಮುನ್ನಲೆಗೆ ವಿಷಯಕ್ಕೆ ಪ್ರತಿಕ್ರಿಯಿಸಿ, ಸೌಜನ್ಯ ಕೊಲೆ ಪ್ರಕರಣ ಕುರಿತು ನ್ಯಾಯಾಲಯದಿಂದಲೂ ತೀರ್ಪು ಬಂದಿದೆ. ನಾನು ಒಂದು ಸಾಂವಿಧಾನಿಕ ಹುದ್ದೆಯಲ್ಲಿದ್ದುಕೊಂಡು ನ್ಯಾಯಾಲಯದ ತೀರ್ಪನ್ನು ಪ್ರಶ್ನೆ ಮಾಡಲಿಕ್ಕೆ ಆಗಲ್ಲ. ನಾನು ಮಾತ್ರ ಆ ಹೆಣ್ಣು ಮಗಳ ಪರವಾಗಿ ನಿಲ್ಲುತ್ತೇನೆ. ಆ ಪ್ರಕರಣದಲ್ಲಿ ಸಾವಿಗೀಡಾದ ಎಲ್ಲರಿಗೂ ನ್ಯಾಯ ಸಿಗಬೇಕು ಎನ್ನುವುದು ನನ್ನ ಆಶಯ. ಧರ್ಮಸ್ಥಳಕ್ಕೆ ಹೋದಾಗ ಸಂತ್ರಸ್ತ ಕುಟುಂಬ ಭೇಟಿ ಮಾಡುವುದಾಗಿ ಹೇಳಿದರು.

ಅಹವಾಲು ಸ್ವೀಕಾರ: ಕೇಂದ್ರ ಕಾರಾಗೃಹ ಆವರಣದಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಹಲವು ಮಹಿಳೆಯರಿಂದ ಮನವಿ ಸ್ವೀಕರಿಸಿದರು.