ಗುಂಡ್ಲುಪೇಟೆ: ಜಮೀನಿನಲ್ಲಿ ಮೇಯುತ್ತಿದ್ದ ಎತ್ತಿನ ಮೇಲೆ ಹುಲಿ ದಾಳಿ ನಡೆಸಿದ್ದು, ಎತ್ತು ಧೈರ್ಯದಿಂದ ಹುಲಿಯನ್ನು ಹಿಮ್ಮೆಟ್ಟಿಸಿ ಮನೆಗೆ ವಾಪಸ್ಸಾದ ಘಟನೆ ನಡೆದಿದೆ.
ತಾಲ್ಲೂಕಿನ ಕಲ್ಲಹಳ್ಳಿ ಗ್ರಾಮದ ಮಧು ಎಂಬುವವರಿಗೆ ಸೇರಿದ ಎತ್ತುಗಳನ್ನು ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ಸಂದರ್ಭದಲ್ಲಿ ಹುಲಿ ದಾಳಿ ನಡೆಸಿದೆ. ಈ ವೇಳೆ ಎತ್ತು ಹುಲಿಗೆ ಪ್ರತಿರೋಧ ತೋರಿ ವೇಗವಾಗಿ ತನ್ನ ಯಜಮಾನನ ಮನೆ ಬಳಿ ಬಂದಿತು ಎನ್ನಲಾಗಿದೆ.
ಈ ವೇಳೆ ಗ್ರಾಮಸ್ಥರು ಆತಂಕಗೊಂಡು ಎತ್ತಿಗೆ ಚಿಕಿತ್ಸೆ ನೀಡುವಂತೆ ಪಶುವೈದ್ಯರಿಗೆ ತಿಳಿಸಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಹುಲಿ ದಾಳಿಯಿಂದ ಎತ್ತಿನ ಮೈ, ಕತ್ತಿನ ಭಾಗದಲ್ಲಿ ಪರಚಿದ ಗಾಯಗಳಾಗಿವೆ. ಸಂಪಿಗೆಪುರ, ಪಡಗೂರು, ಕಲ್ಲಹಳ್ಳಿ ಭಾಗದಲ್ಲಿ ಹುಲಿ ದಾಳಿ ಹೆಚ್ಚಾಗುತ್ತಿದ್ದು ಅರಣ್ಯ ಇಲಾಖೆ ಹುಲಿ ಸೆರೆ ಹಿಡಿದು ರೈತರಲ್ಲಿರುವ ಆತಂಕ ದೂರ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.