ಮನೆ ಕಾನೂನು ಆರೋಪಿಗಳಿಂದ ಪವರ್‌ ಆಫ್‌ ಅಟಾರ್ನಿ ಪಡೆದವರು ಕ್ರಿಮಿನಲ್‌ ಪ್ರಕರಣ ರದ್ದತಿ ಮನವಿ ನಿರ್ವಹಿಸಲಾಗದು: ಕರ್ನಾಟಕ ಹೈಕೋರ್ಟ್‌

ಆರೋಪಿಗಳಿಂದ ಪವರ್‌ ಆಫ್‌ ಅಟಾರ್ನಿ ಪಡೆದವರು ಕ್ರಿಮಿನಲ್‌ ಪ್ರಕರಣ ರದ್ದತಿ ಮನವಿ ನಿರ್ವಹಿಸಲಾಗದು: ಕರ್ನಾಟಕ ಹೈಕೋರ್ಟ್‌

0

ಆರೋಪಿಯಿಂದ ಅಧಿಕಾರ ಪತ್ರ (ಪವರ್‌ ಆಫ್‌ ಅಟಾರ್ನಿ) ಪಡೆದವರು ಸಿಆರ್‌ಪಿಸಿ ಸೆಕ್ಷನ್‌ 482ರ ಅಡಿ ಕ್ರಿಮಿನಲ್‌ ಪ್ರಕ್ರಿಯೆ ರದ್ದುಪಡಿಸುವಂತೆ ಕೋರುವ ಮನವಿಯನ್ನು ನಿರ್ವಹಿಸಲಾಗದು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಪ್ರಕರಣವೊಂದರಲ್ಲಿ ತಾಯಿ ಮತ್ತು ಆಕೆಯ ಪುತ್ರಿ ಸಲ್ಲಿಸಿದ್ದ ಮನವಿಯನ್ನು ವಜಾ ಮಾಡಿರುವ ನ್ಯಾಯಾಲಯವು ವಾಸ್ತವಿಕ ಸಂಗತಿಗಳನ್ನು ಬಚ್ಚಿಟ್ಟಿದ್ದಕ್ಕಾಗಿ ಅವರಿಗೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಿದೆ (ಸಮಂತಾ ವಿಲ್ಲಿಸ್‌ ಮತ್ತು ಇತರರು ವರ್ಸಸ್‌ ಕರ್ನಾಟಕ ರಾಜ್ಯ).

ಕೋಲ್ಕತಾ ಮೂಲದವರಾದ ಸದ್ಯ ಲಂಡನ್‌ನಲ್ಲಿ ನೆಲೆಸಿರುವ ಸಮಂತಾ ಕ್ರಿಶ್ಚಿನಾ ಡೆಲ್ಫಿನಾ ವಿಲ್ಲಿಸ್‌ ಮತ್ತು ಆಕೆಯ ತಾಯಿ ಶಕೀಲಾ ವಿಲ್ಲಿಸ್‌ ಅವರ ವಿರುದ್ಧ ಸಮಂತಾ ಪತಿ ಸಯದ್‌ ಅಲಿ ಹಿಂದೂಸ್ತಾನಿ ದಾಖಲಿಸಿದ್ದ ವಂಚನೆ, ಕಳವು, ಸುಲಿಗೆ ಮತ್ತು ಕ್ರಿಮಿನಲ್‌ ಬೆದರಿಕೆ ಪ್ರಕರಣವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು. ಅರ್ಜಿದಾರರಾದ ಸಮಂತಾ ಮತ್ತು ಡೆಲ್ಫಿನಾ ಅವರನ್ನು ಅವರ ಪರವಾಗಿ ಅಧಿಕಾರ ಪತ್ರ ಹೊಂದಿದ್ದವರು ಪ್ರಕರಣದಲ್ಲಿ ಪ್ರತಿನಿಧಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಪೀಠವು ವಿವಿಧ ಹೈಕೋರ್ಟ್‌ ಆದೇಶಗಳನ್ನು ಉಲ್ಲೇಖಿಸಿ, ಇವೆಲ್ಲವೂ ಟಿ ಸಿ ಮಥಾಯ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಆಧರಿಸಿವೆ ಎಂದು ಹೇಳಿದ್ದು, ನ್ಯಾಯಾಲಯದ ಯಾವುದೇ ಅನುಮತಿ ಪಡೆಯದೇ ಅಧಿಕಾರ ಪತ್ರ ಪಡೆದಿರುವವರು ಸಲ್ಲಿಸಿರುವ ಹಾಗೂ ವೈಯಕ್ತಿಕವಾಗಿ ಪ್ರಕರಣದ ಬಗ್ಗೆ ತಮಗೆ ಅರಿವಿದೆ ಎಂಬುದನ್ನು ಮನವಿಯಲ್ಲಿ ಉಲ್ಲೇಖಿಸದೇ ಸಂವಿಧಾನದ 226 ಮತ್ತು 227 ವಿಧಿಗಳ ಜೊತೆಗೆ ಸಿಆರ್‌ಪಿಸಿ ಸೆಕ್ಷನ್‌ 482ರ ಅಡಿ ಸಲ್ಲಿಸಿರುವ ಹಾಲಿ ಮನವಿಯು ನಿರ್ವಹಣೆಗೆ ಅರ್ಹವಾಗಿಲ್ಲ. ಅಧಿಕಾರ ಪತ್ರ ಹೊಂದಿರುವವರು ಆರೋಪಿಗಳನ್ನು ಪ್ರತಿನಿಧಿಸಲಾಗದು ಮತ್ತು ಹಾಲಿ ಮನವಿಯನ್ನು ನಿರ್ವಹಿಸಲಾಗದು”ಎಂದು ಹೇಳಿತು.

2021ರ ಜುಲೈ 23ರಂದು ಕೋಲ್ಕತ್ತಾದಿಂದ ಲಂಡನ್‌ಗೆ ಪ್ರಯಾಣ ಬೆಳೆಸಿದ್ದು, ಅಲ್ಲಿಂದ ಕೋಲ್ಕತ್ತಾಗೆ ನವೆಂಬರ್‌ 14ರಂದು ಮರಳಿದ್ದೆವು. ಈ ವೇಳೆಗಾಗಲೇ ಪತಿ ಸಯದ್‌ ಅಲಿ ಹಿಂದೂಸ್ತಾನಿ ಅವರ ದೂರಿನ ಮೇರೆಗೆ ಬೆಂಗಳೂರು ಪೊಲೀಸರು ದೂರು ದಾಖಲಿಸಿದ್ದರು ಎಂದು ಅರ್ಜಿದಾರರು ವಾದಿಸಿದ್ದರು.

ಆರೋಪಿಗಳಾದ ಸಮಂತಾ ವಿಲ್ಲಿಸ್‌ ಮತ್ತು ಆಕೆಯ ತಾಯಿ ಶಕೀಲಾ ವಿಲ್ಲಿಸ್‌ ಅವರನ್ನು ಕೋಲ್ಕತ್ತಾದಲ್ಲಿ ಬಂಧಿಸಿ, 10 ದಿನಗಳಲ್ಲಿ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರಾಗಬೇಕು ಎಂಬ ಷರತ್ತು ವಿಧಿಸಿ, ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. 2021ರ ಡಿಸೆಂಬರ್‌ 13ರಂದು ಶರಣಾಗಿದ್ದ ಆರೋಪಿಗಳು ಆ ಬಳಿಕ ಜಾಮೀನು ಕೋರಿ ಮನವಿ ಸಲ್ಲಿಸಿದ್ದರು. ಈಗಾಗಲೇ ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂಬುದನ್ನು ಮನನ ಮಾಡಿಕೊಂಡಿರುವ ನ್ಯಾಯಾಲಯವು ಅವರ ಮನವಿಯನ್ನು 2021ರ ಡಿಸೆಂಬರ್‌ 23ರಂದು ವಜಾ ಮಾಡಿತ್ತು.

ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ ಬಳಿಕ 2021ರ ನವೆಂಬರ್‌ 19ರ ನಂತರ ನಡೆದ ಬೆಳವಣಿಗೆಗಳನ್ನು ನ್ಯಾಯಾಲಯದಿಂದ ಬಚ್ಚಿಡಲಾಗಿತ್ತು. ವಾಸ್ತವಿಕ ಅಂಶಗಳನ್ನು ಮುಚ್ಚಿಟ್ಟಿದ್ದಕ್ಕೆ ಆಕ್ರೋಶಗೊಂಡ ಪೀಠವು ಒಂದು ಲಕ್ಷ ರೂಪಾಯಿ ದಂಡ ವಿಧಿಸಿದ್ದು ಅದನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸುವಂತೆ ಅರ್ಜಿದಾರರಿಗೆ ಆದೇಶ ಮಾಡಿದೆ.

ಪ್ರಕರಣದ ಹಿನ್ನೆಲೆ: ಸಮಂತಾ ವಿಲ್ಲಿಸ್‌ ಮತ್ತು ಸಯದ್‌ ಅಲಿ ಹಿಂದೂಸ್ತಾನಿ ಅವರು ಎಲೈಟ್‌ ಮ್ಯಾಟ್ರಿಮೋನಿ ಎಂಬ ವೆಬ್‌ಸೈಟ್‌ ಮೂಲಕ ಪರಿಚಿತರಾಗಿ, 2021ರ ಜೂನ್‌ 6ರಂದು ವಿವಾಹ ಮಾಡಿಕೊಂಡಿದ್ದರು. ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಸಮಂತಾ ಕೋಲ್ಕತ್ತಾದಲ್ಲಿರುವ ತಮ್ಮ ಪೂರ್ವಜರ ಮನೆಗೆ ಹೋಗಿದ್ದರು. ಜಂಟಿ ಹೆಸರಿನಲ್ಲಿ ಆಸ್ತಿ ಖರೀದಿಸುವುದಾಗಿ ತಿಳಿಸಿದ್ದ ಸಮಂತಾ ಅವರು ಪತಿಯ ಮನವೊಲಿಸಿ ಅವರಿಂದ 7.5 ಕೋಟಿ ರೂಪಾಯಿಗಳನ್ನು ತಮ್ಮ ಬ್ಯಾಂಕ್‌ ಖಾತೆಗೆ ವರ್ಗಾಯಿಸಿಕೊಂಡಿದ್ದರು ಎಂಬುದು ಆರೋಪವಾಗಿದೆ.