ಮನೆ ರಾಜ್ಯ ಮೈಸೂರು ಎಕ್ಸ್‌ ಪ್ರೆಸ್‌ ವೇಯಲ್ಲಿ ತಾಲೂಕುಗಳ ಆಗಮನ-ನಿರ್ಗಮನ ಮಾರ್ಗ ಮುಚ್ಚಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ

ಮೈಸೂರು ಎಕ್ಸ್‌ ಪ್ರೆಸ್‌ ವೇಯಲ್ಲಿ ತಾಲೂಕುಗಳ ಆಗಮನ-ನಿರ್ಗಮನ ಮಾರ್ಗ ಮುಚ್ಚಿಲ್ಲ: ಸಚಿವ ಸತೀಶ್‌ ಜಾರಕಿಹೊಳಿ

0

ಬೆಂಗಳೂರು: ಮೈಸೂರು ಎಕ್ಸ್‌ಪ್ರೆಸ್‌ವೇಗೆ ಸಂಬಂಧಪಟ್ಟಂತೆ ಬಿಡದಿ, ಮಂಡ್ಯ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲೂಕಿನ ವಿವಿಧೆಡೆ ನೀಡಲಾಗಿದ್ದ ಪ್ರವೇಶ ಹಾಗೂ ನಿರ್ಗಮನ ಮಾರ್ಗಗಳನ್ನು ಮುಚ್ಚಲಾಗಿಲ್ಲ ಎಂದು ಲೋಕೋಪಯೋಗಿ ಸಚಿವರಾದ ಸತೀಶ್‌ ಜಾರಕಿಹೊಳಿ ತಿಳಿಸಿದ್ದಾರೆ.

ವಿಧಾನ ಪರಿಷತ್‌ ಸದಸ್ಯ ದಿನೇಶ್‌ ಗೂಳಿಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಚಿವರು, ಅಪಘಾತಗಳ ಹಿನ್ನೆಲೆಯಲ್ಲಿ ತೂಬಿನಕೆರೆ ಬಳಿ ಟೋಲ್‌ ಬೈಪಾಸ್‌ ಮಾಡುವ ಸ್ಥಳದಲ್ಲಿ ಟ್ರಕ್‌ಗಳನ್ನು ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ.

ಬಿಡದಿ, ಮಂಡ್ಯ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲೂಕಿನ ಕೇಂದ್ರಗಳಲ್ಲಿ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್‌ವೇಗೆ ಸಂಬಂಧಿಸಿದ ಆಗಮನ-ನಿರ್ಗಮನ ಪ್ರವೇಶದ್ವಾರಗಳನ್ನು ಯಾವುದೇ ಮುನ್ಸೂಚನೆ ಇಲ್ಲದೆ ಮುಚ್ಚಿರುವುದು ಸಾರ್ವಜನಿಕರಿಗೆ ತೊಂದರೆಯನ್ನುಂಟು ಮಾಡುತ್ತಿದೆ. ಇದು ಸರ್ಕಾರದ ಗಮನಕ್ಕೆ ಬಂದಿದೆಯೇ ಎಂದು ದಿನೇಶ್‌ ಗೂಳಿಗೌಡ ಪ್ರಶ್ನೆ ಮಾಡಿದ್ದರು. ಇದಕ್ಕೆ ಉತ್ತರಿಸಿದ ಸಚಿವರು, ಎನ್‌ಎಚ್‌ -275 ರ ಬೆಂಗಳೂರು – ಮೈಸೂರು ವಿಭಾಗದ ತೂಬಿನಕೆರೆ ಬಳಿ ಬೆಂಗಳೂರಿನಿಂದ ಮೈಸೂರು ಕಡೆಗೆ ಸಂಚರಿಸುತ್ತಿರುವ ಭಾರಿ ವಾಹನಗಳು ಟೋಲ್ ಪ್ಲಾಜಾವನ್ನು ಬೈಪಾಸ್ ಮಾಡುವ ಸರ್ವಿಸ್ ರಸ್ತೆಯಲ್ಲಿ ನಿರ್ಗಮಿಸುತ್ತಿದ್ದವು. ಇಲ್ಲಿ ಪಕ್ಕದ ಹಳ್ಳಿಗರು, ಸ್ಥಳೀಯ ಸಂಚಾರ ಮತ್ತು ದ್ವಿಚಕ್ರ ವಾಹನಗಳು ಸಂಚರಿಸುತ್ತಿದ್ದರಿಂದ ವಾಹನಗಳ ದಟ್ಟಣೆಯಿಂದ ಸರ್ವೀಸ್ ರಸ್ತೆಯಲ್ಲಿ ಅಪಘಾತಗಳಾಗುತ್ತಿದ್ದವು.

ಇನ್ನು ಎಕ್ಸ್‌ಪ್ರೆಸ್‌ವೇದಲ್ಲಿನ ಎರಡೂ ಬದಿಯ ಕಾಮಗಾರಿಗೆ ಸಂಬಂಧಿಸಿದಂತೆ ಯೋಜನಾ ಒಪ್ಪಂದದ ಪ್ರಕಾರ ಬೆಂಗಳೂರಿನಿಂದ ಮೈಸೂರು ಎನ್‌ಎಚ್‌-275 ರವರೆಗೆ ಸರ್ವೀಸ್ ರಸ್ತೆಯನ್ನು ಪೂರ್ಣಗೊಳಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಬೆಂಗಳೂರಿನಿಂದ ಮೈಸೂರಿಗೆ ಹೋಗಬೇಕಾದಲ್ಲಿ ವಂಡರ್‌ಲಾ, ಬಿಡದಿ ಬಳಿ ನಿರ್ಗಮನಕ್ಕೆ ದಾರಿ ಇದ್ದರೆ, ಬಿಡದಿಯಲ್ಲಿ ಆಗಮನಕ್ಕೂ ಅವಕಾಶವಿದೆ. ರಾಮನಗರದಲ್ಲಿ ಒಂದು ಕಡೆ, ಚನ್ನಪಟ್ಟಣ, ಮದ್ದೂರು, ಮಂಡ್ಯದಲ್ಲಿ ತಲಾ ಎರಡು ಕಡೆ ಆಗಮನ-ನಿರ್ಗಮನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ. ಇನ್ನು ತೂಬಿನಕೆರೆ ಇಂಡಸ್ಟ್ರಿಯಲ್‌ ಪ್ರದೇಶದಲ್ಲಿ ಆಗಮನಕ್ಕೆ ಅವಕಾಶವಿದ್ದರೆ, ಭಾರೀ ವಾಹನಗಳಿಗೆ ನಿರ್ಗಮಕ್ಕೆ ಅನುಮತಿಯನ್ನು ನೀಡಲಾಗಿಲ್ಲ. ಶ್ರೀರಂಗಪಟ್ಟಣದ ಎರಡು ಕಡೆ ಆಗಮನ-ನಿರ್ಗಮನಕ್ಕೆ ಅವಕಾಶವನ್ನು ಕಲ್ಪಿಸಲಾಗಿದೆ.

ಮೈಸೂರಿಂದ ಬೆಂಗಳೂರಿಗೆ ಆಗಮನ-ನಿರ್ಗಮನ: ಶ್ರೀರಂಗಪಟ್ಟಣ, ತೂಬಿನಕೆರೆ ಇಂಡಸ್ಟ್ರಿಯಲ್‌ ಏರಿಯಾ, ಮಂಡ್ಯ, ಮದ್ದೂರು, ಚನ್ನಪಟ್ಟಣ, ಬಿಡದಿಗಳಲ್ಲಿ ತಲಾ ಎರಡು ಕಡೆ ಆಗಮನ-ನಿರ್ಗಮನಕ್ಕೆ ಅವಕಾಶವಿದ್ದರೆ, ರಾಮನಗರದಲ್ಲಿ ಒಂದು ಕಡೆ ಅವಕಾಶವನ್ನು ಕಲ್ಪಿಸಲಾಗಿದೆ.