ಮನೆ ರಾಜ್ಯ ಮಂಡ್ಯದ ಟಿ ಕಾಗೇಪುರ ವಸತಿಶಾಲೆಯಲ್ಲಿ ವಿಷಾಹಾರ ಸೇವನೆಯಿಂದ ಓರ್ವ ವಿದ್ಯಾರ್ಥಿ ಸಾವು: ಕ್ರಮಕ್ಕೆ ಸಿಎಂ ಸೂಚನೆ

ಮಂಡ್ಯದ ಟಿ ಕಾಗೇಪುರ ವಸತಿಶಾಲೆಯಲ್ಲಿ ವಿಷಾಹಾರ ಸೇವನೆಯಿಂದ ಓರ್ವ ವಿದ್ಯಾರ್ಥಿ ಸಾವು: ಕ್ರಮಕ್ಕೆ ಸಿಎಂ ಸೂಚನೆ

0

ಮಂಡ್ಯ: ವಿಷಾಹಾರ ಸೇವಿಸಿರುವ ಕಾರಣದಿಂದ ಒಬ್ಬ ವಿದ್ಯಾರ್ಥಿ ಸಾವನ್ನಪ್ಪಿ, 28ಕ್ಕೂ ಹೆಚ್ಚು ಮಂದಿ ಆಸ್ಪತ್ರೆ ಸೇರಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಮಂಡ್ಯದ ಮಳವಳ್ಳಿ ತಾಲ್ಲೂಕಿನ ಟಿ ಕಾಗೇಪುರ ಗ್ರಾಮದ ವಸತಿಶಾಲೆಯಲ್ಲಿ ಹೋಳಿ ಪಾರ್ಟಿಯ ಊಟ ಸೇವಿಸಿದ್ದ ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದಾರೆ.

ಮೇಘಾಲಯ ಮೂಲದ ಕೇರ್ಲಾಂಗ್‌ (13) ಎನ್ನುವ ವಿದ್ಯಾರ್ಥಿ ಫುಡ್‌ ಪಾಯಿಸನ್ಸ್‌ನಿಂದಾಗಿ ಚಿಕಿತ್ಸೆ ಫಲಿಸದೇ ಆಸ್ಪತ್ರೆಯಲ್ಲಿ ಮೃತನಾಗಿದ್ದಾನೆ. 28 ಮಂದಿ ಮಕ್ಕಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ವಸತಿ ಶಾಲೆಯಲ್ಲಿ ವಿಷಾಹಾರ ಸೇವನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಟಿ ಕಾಗೇಪುರ ಗ್ರಾಮದಲ್ಲಿರುವ ಗೋಕುಲ ವಿದ್ಯಾ ಸಂಸ್ಥೆಯಲ್ಲಿ ಈ ಘಟನೆ ನಡೆದಿದೆ. ಹೋಳಿ ಆಚರಣೆಯ ಸಂಬಂಧ ತಯಾರಿಸಿದ್ದ ಆಹಾರ ಸೇವಿಸಿದ ನಂತರ ಮಕ್ಕಳಿಗೆ ಹೊಟ್ಟೆ ನೋವು ಕಾಣಿಸಿತ್ತು. ಕೆಲವು ಮಕ್ಕಳಿಗೆ ವಾಂತಿ, ಬೇಧಿ ಕೂಡ ಕಾಣಿಸಿತ್ತು. ತಕ್ಷಣವೇ ಅವರನ್ನೆಲ್ಲಾ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. 

ಉದ್ಯಮಿಯೊಬ್ಬರು ಹೋಳಿ ಹಬ್ಬದ ಪ್ರಯುಕ್ತ ನಡೆಸಿದ ಪಾರ್ಟಿಯಲ್ಲಿ ಉಳಿದ ಆಹಾರವನ್ನು ವಸತಿ ಶಾಲೆಯ ಮಕ್ಕಳಿಗೆ ಕಳುಹಿಸಿದ್ದರು. ಸಂಜೆ ಆ ಆಹಾರವನ್ನು ಸೇವಿಸಿದ ಮಕ್ಕಳಿಗೆ ಹೊಟ್ಟೆ ನೋವು ಕಾಣಿಸಿತ್ತು. ಆ ವಸತಿ ಶಾಲೆಯಲ್ಲಿ ಮೇಘಾಲಯ ಮೂಲದ 24 ಮಕ್ಕಳು ಹಾಗೂ ಸ್ಥಳೀಯ 6 ಮಕ್ಕಳು ಕಲಿಯುತ್ತಿದ್ದರು. ರಾತ್ರಿ ಊಟ ಸೇವಿಸಿ ಮಲಗಿದ್ದ ಮಕ್ಕಳ ಬೆಳಿಗ್ಗೆ ಅಸ್ವಸ್ಥರಾಗಿದ್ದರು. ತೀವ್ರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆ ಮಕ್ಕಳನ್ನು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು, ನಂತರ ಮಂಡ್ಯದ ಮಿಮ್ಸ್‌ಗೆ ದಾಖಲಿಸಲಾಗಿದೆ.

29 ಮಕ್ಕಳು ಅಸ್ವಸ್ಥಗೊಂಡಿದ್ದರು. ಅವರನ್ನು ಮಳವಳ್ಳಿ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಗಂಭೀರ ಸ್ಥಿತಿಯಲ್ಲಿದ್ದ 8 ಮಕ್ಕಳನ್ನು ಮಂಡ್ಯದ ಜಿಲ್ಲಾಸ್ಪತ್ರೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸುತ್ತಿದ್ದೇವೆ. ಜಿಲ್ಲಾಧಿಕಾರಿ ಮತ್ತು ಸಚಿವರ ನಿರ್ದೇಶನದಂತೆ ಉಳಿದ ಎಲ್ಲಾ ಮಕ್ಕಳನ್ನು ಚಿಕಿತ್ಸೆಗೆಂದು ಇಲ್ಲಿಗೆ ಕರೆದುಕೊಂಡು ಬರುತ್ತೇವೆ‘ ಎಂದು ಮಂಡ್ಯ ಡಿಎಚ್‌ಒ ಡಾ. ಮೋಹನ್ ತಿಳಿಸಿದ್ದಾರೆ.

ಕಠಿಣ ಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಸೂಚನೆ: ಮಳವಳ್ಳಿ ತಾಲ್ಲೂಕಿನ ಟಿ ಕಾಗೇಪುರ ಖಾಸಗಿ ವಸತಿ ಶಿಕ್ಷಣ ಸಂಸ್ಥೆಯಲ್ಲಿ ವಿಷಾಹಾರ ಸೇವಿಸಿ ವಿದ್ಯಾರ್ಥಿಯೊಬ್ಬ ಮೃತಪಟ್ಟು ಹಲವು ಮಕ್ಕಳು ತೀವ್ರ ಅಸ್ವಸ್ಥಗೊಂಡ ವಿಚಾರ ತಿಳಿದು ನೋವಾಯಿತು. ಘಟನೆ ನನ್ನ ಗಮನಕ್ಕೆ ಬಂದ ಕೂಡಲೇ ಮಂಡ್ಯ ಜಿಲ್ಲೆಯ ಜಿಲ್ಲಾಧಿಕಾರಿಗಳ ಜೊತೆ ಮಾತನಾಡಿ ಮಕ್ಕಳಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡುವಂತೆ ಹಾಗೂ ಘಟನೆಗೆ ಕಾರಣರಾದವರ ಮೇಲೆಯೂ ಕಠಿಣ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದೇನೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ‘ ಎಂದು ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ.