ಮನೆ ರಾಜಕೀಯ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಕೆ.ಎಸ್ ಶಿವರಾಮ್ ಮನವಿ

ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ಕೆ.ಎಸ್ ಶಿವರಾಮ್ ಮನವಿ

0

ಮೈಸೂರು(Mysuru): ಜೂನ್ 13 ರಂದು ನಡೆಯುವ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯಲ್ಲಿ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಬೇಕೆಂದು ಕರ್ನಾಟಕ ರಾಜ್ಯ ಹಿಂದುಳಿದವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ.ಎಸ್ ಶಿವರಾಮ್ ಮನವಿ ಮಾಡಿದರು.

ನಗರದಲ್ಲಿ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಬಹಳ ಉಲ್ಭಣಗೊಂಡಿದೆ. ಪದವೀಧರರು ಉದ್ಯೋಗವಿಲ್ಲದೆ ಅಲೆಯುತ್ತಿದ್ದಾರೆ. ಅವರ ಬದುಕು ಬೀದಿಗೆ ಬಿದ್ದಿದೆ. ಅಲ್ಲದೇ ಇತ್ತೀಚೆಗೆ ಪಿಎಸ್‍ ಐ ಹಾಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದು ಪದವೀಧರ ಅಭ್ಯರ್ಥಿಗಳಿಗೆ ಬಹಳ ಅನ್ಯಾಯವಾಗಿದೆ. ಇಡೀ ಪ್ರಕರಣವನ್ನು ಹಳ್ಳಹಿಡಿಸಿದ್ದಾರೆ. ಆ ಮೂಲಕ ಪ್ರತಿಭಾವಂತ ಅಭ್ಯರ್ಥಿಗಳನ್ನು ಸರ್ಕಾರ ವಂಚಿಸಿದೆ ಎಂದು ಕಿಡಿಕಾರಿದರು.

ಹೀಗಾಗಿ ಬಿಜೆಪಿ ಅಭ್ಯರ್ಥಿ ವಿರುದ್ಧ ಮತ ಚಲಾಯಿಸುವ ಮೂಲಕ ಸರ್ಕಾರಕ್ಕೆ ತಕ್ಕಪಾಠ ಕಲಿಸಬೇಕು. ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಧು ಜಿ.ಮಾದೇಗೌಡ ಅವರನ್ನು ಈ ಬಾರಿ ಬೆಂಬಲಿಸಬೇಕೆಂದು ಮನವಿ ಮಾಡುತ್ತೇವೆ ಎಂದು ತಿಳಿಸಿದರು.

ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ರವರು ಮುಖ್ಯಮಂತ್ರಿಗಳಾಗಿ ನೀಡಿದ ಆಡಳಿತ, ಜನಪ್ರಿಯ ಕಾರ್ಯಕ್ರಮಗಳು, ಸಾಮಾಜಿಕ ನ್ಯಾಯದ ಆಡಳಿತಕ್ಕೆ ಬದ್ಧರಾಗಿ ಎಲ್ಲಾ ವರ್ಗದ ಬಡ ಜನಗಳಿಗೆ ವಿವಿಧ ಯೋಜನೆಗಳನ್ನು ನೀಡಿದ್ದಾರೆ.  ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಸುಮಾರು ದಶಕಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ ಮಹನೀಯರಲ್ಲಿ ಡಾ.ಜಿ.ಮಾದೇಗೌಡ ರವರು ಒಬ್ಬರು ಎಂದರು.

ಮಂಡ್ಯ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿಯ ಅಧ್ಯಕ್ಷರಾಗಿ, ಕಾವೇರಿ ನೀರಿಗಾಗಿ, ರೈತರ ಹಿತರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು. ಇಂತಹ ಮಹನೀಯರ ಪುತ್ರರಾದ, ಮಧು ಜಿ.ಮಾದೇಗೌಡ ರವರನ್ನು ಈ ಬಾರಿ ನಾವು ಬೆಂಬಲಿಸಲು ತೀರ್ಮಾನಿಸಿದ್ದೇವೆ. ಆದ್ದರಿಂದ ಡಾ.ಜಿ.ಮಾದೇಗೌಡರವರ ಸೇವೆಯನ್ನು ಪರಿಗಣಿಸಿ, ದಕ್ಷತೆ ಮತ್ತು ನಿಷ್ಠಾವಂತಿಕೆಯಿರುವ ಮಧು ಜಿ.ಮಾದೇಗೌಡ ಅವರನ್ನು ಈ ಬಾರಿ ಪದವೀಧರರು ಮೊದಲನೇ ಪ್ರಾಶಸ್ತ್ಯದ ಮತಗಳನ್ನು ನೀಡಿ ಗೆಲ್ಲಿಸಬೇಕು ಎಂದು ಕೆ.ಎಸ್ ಶಿವರಾಮು ಮನವಿ ಮಾಡಿದರು.