ಮನೆ ಸ್ಥಳೀಯ ಮುಕ್ತ ವಿವಿ ಭ್ರಷ್ಟಾಚಾರ: ತನಿಖಾಧಿಕಾರಿಗಳಿಗೆ ದಾಖಲೆ ಸಲ್ಲಿಕೆ:

ಮುಕ್ತ ವಿವಿ ಭ್ರಷ್ಟಾಚಾರ: ತನಿಖಾಧಿಕಾರಿಗಳಿಗೆ ದಾಖಲೆ ಸಲ್ಲಿಕೆ:

0

ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ನಡೆದಿರುವ ಅಕ್ರಮ ನೇಮಕಾತಿ ಸೇರಿದಂತೆ ಇನ್ನಿತರ ಭ್ರಷ್ಟಾಚಾರ ಕುರಿತು ತನಿಖೆ ನಡೆಸುತ್ತಿರುವ ವಿಶ್ರಾಂತ ಕುಲಪತಿ ಡಾ.ಎನ್.ಆರ್. ನಿರಂಜನ್ ಅವರಿಗೆ ಅಕ್ರಮ ನೇಮಕಾತಿಗಳ ಹಾಗೂ ಹಣ ದುರುಪಯೋಗ ಅವ್ಯವಹಾರದ ಮಾಹಿತಿಯನ್ನು ಡಿ. ದೇವರಾಜ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿ ರಾಜ್ಯಾಧ್ಯಕ್ಷರಾದ ಜಾಕಿರ್ ಹುಸೇನ್ ಸೋಮವಾರ ರಾತ್ರಿ ನೀಡಿದರು.

ಸತತ ೬ ಗಂಟೆಗಳ ಕಾಲ ಕರಾಮುವಿವಿ ಭ್ರಷ್ಟಾಚಾರ ಕುರಿತು ಜಾಕೀರ್ ಹುಸೇನ್ ಅವರೊಂದಿಗೆ ಚರ್ಚೆ ನಡೆಸಿ ಮಹಿತಿಯನ್ನು ಪಡೆಯಲಾಯಿತು.ಕೆಲ ದಿನಗಳ ಹಿಂದೆ ಡಿ.ದೇವರಾಜ್ ಅರಸು ಪ್ರತಿಮೆ ಪ್ರತಿಷ್ಠಾಪನೆ ಸಮಿತಿಯು ಮುಕ್ತ ವಿವಿಯಲ್ಲಿ ನಡೆಯುತ್ತಿರುವ ಅಕ್ರಮ ನೇಮಕಾತಿಗಳ ವಿರುದ್ಧ ಸತತವಾಗಿ ಪತ್ರ ಚಳುವಳಿಯನ್ನು ನಡೆಸಿತ್ತು.

ಮುಕ್ತ ವಿವಿ ಕುಲಸಚಿವರು ಹಾಗೂ ಕುಲಪತಿಗಳು ಸರ್ಕಾರದ ಯಾವುದೇ ಅನುಮತಿ ಅಥವಾ ಅನುಮೋದನೆ ಪಡೆಯದೆ ನಿರಂತರ ಅನಾವಶ್ಯಕ ಬೋಧಕ ಹಾಗೂ ಬೋಧಕೇತರ ನೌಕರರನ್ನು ನೇಮಕ ಮಾಡುವ ಮೂಲಕ ಹಣ ಗಳಿಸುತ್ತಿದ್ದಾರೆ. ಕರಾಮುವಿವಿಯಲ್ಲಿ ಮೌಲಿಕ ಶಿಕ್ಷಣಕ್ಕಿಂತ ಕಟ್ಟಡ ಕಟ್ಟುವ, ಅನಾವಶ್ಯಕ ನೇಮಕಾತಿ ಮಾಡುವ ದಂಧೆ ನಡೆಯುತ್ತಿದ್ದು, ಮುಕ್ತ ವಿವಿಯನ್ನು ಮುಚ್ಚುವ ಹಂತಕ್ಕೆ ತಲುಪಿಸಿದ್ದಾರೆ. ವಿದ್ಯಾರ್ಥಿಗಳ ಸಂಖ್ಯೆಗಿಂತ ಬೋಧಕ ಬೋಧಕೇತರ ಸಿಬ್ಬಂದಿಯನ್ನು ನೇಮಕ ಮಾಡುತ್ತಾ ಅವರಿಂದ ಹಣವು ವಸೂಲಿ ಮಾಡುವ ಕೃತ್ಯ ಈಗಾಗಲೇ ಬಹಿರಂಗವಾಗಿದೆ ಎಂದು ಜಾಕೀರ್ ಹುಸೇನ್ ಹೇಳಿದರು. ಈ ವಿಷಯ ವಿಧಾನಸಭೆಯಲ್ಲೂ ಚರ್ಚೆಯಾಗಿದೆ. ಮುಕ್ತ ವಿವಿ ಅಕ್ರಮಗಳ ಬಗ್ಗೆ ತನಿಖೆ ನಡೆಸುವಂತೆ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ ಉಪಾಧ್ಯಕ್ಷರಾದ ಡಾ. ಎನ್‌ಆರ್ ನಿರಂಜನ್ ಅವರಿಗೆ ಜವಾಬ್ದಾರಿಯನ್ನೂ ನೀಡಲಾಗಿದೆ.

ಸದ್ದು ಮಾಡಿದ ವಿಷಯಗಳು:
೧. ಮುಕ್ತ ವಿವಿಯಲ್ಲಿ ನಡೆದಿರುವ ೧೬೦೦ ಅಕ್ರಮ ತಾತ್ಕಾಲಿಕ ನೌಕರರ ನೇಮಕಾತಿ ಪ್ರಕ್ರಿಯೆ,
೨. ರಾಜ್ಯ ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ಪ್ರಾದೇಶಿಕ ನಿರ್ದೇಶಕರ ನೇಮಕ.
೩. ಕೆಲ ಪ್ರಾದೇಶಿಕ ನಿರ್ದೇಶಕರನ್ನು ಕೇಂದ್ರ ಕಚೇರಿಯಲ್ಲಿ ಕೂರಿಸಿಕೊಂಡು ಸಂಬಳ ನೀಡುತ್ತಿರುವುದು,
೪. ಅಕ್ರಮವಾಗಿ ನೇಮಕಗೊಂಡಿರುವ ಪ್ರಾದೇಶಿಕ ನಿರ್ದೇಶಕರನ್ನು ಕ್ಲಾಸ್ಮನ್ ಉನ್ನತ ಹುದ್ದೆಗೆ ನಿಯಮ ಉಲ್ಲಂಘಿಸಿ ನೇಮಿಸಿರುವುದು,
೫. ಅಗತ್ಯವಿಲ್ಲದಿದ್ದರೂ ಕಟ್ಟಡಗಳನ್ನು ಕಟ್ಟುತ್ತಿರುವುದು ಇದಕ್ಕಾಗಿ ಇಡುಗಂಟನ್ನು ಬಳಸುತ್ತಿರುವುದು,
೬. ಅನಾವಶ್ಯಕ ನೇಮಕಾತಿಯನ್ನು ಕೂಡಲೇ ನಿಲ್ಲಿಸಿ ತಾತ್ಕಾಲಿಕ ನೌಕರರನ್ನು ಬಿಡುಗಡೆಗೊಳಿಸಿ ಎಂದು ರಾಜ್ಯ ಸರ್ಕಾರ ೧೮-೦೬- ೨೦೨೪ ರಂದು ಕಟ್ಟುನಿಟ್ಟಾಗಿ ಸೂಚಿಸಿದ್ದರು ತಾತ್ಕಾಲಿಕ ನೇಮಕಾತಿಗಳನ್ನು ಮುಂದುವರುತ್ತಿರುವುದು ಸೇರಿದಂತೆ ಇನ್ನೂ ಹಲವಾರು ವಿಷಯಗಳನ್ನು ತನಿಖಾ ಅಧಿಕಾರಿ ನಿರಂಜನ್ ಪಟ್ಟಿ ಮಾಡಿಕೊಂಡರು.


ಈ ಸಂದರ್ಭದಲ್ಲಿ ಡಿ ದೇವರಾಜ್ ಅರಸು ಪ್ರತಿಮೆ ಪ್ರತಿಷ್ಠಾಪನ ಸಮಿತಿಯ ರಾಜ್ಯಾಧ್ಯಕ್ಷರಾದ ಜಾಕಿರ್ ಹುಸೇನ್, ರಾಜ್ಯ ಪ್ರಧಾನ ಸಂಚಾಲಕರಾದ ಡೇರಿ ವೆಂಕಟೇಶ್ ಮತ್ತು ಸಂಘಟನಾ ಕಾರ್ಯದರ್ಶಿಯಾದ ಪ್ರಶಾಂತ್ ಆರ್ಯ ಹಾಗೂ ಮುಕ್ತ ವಿವಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.