ಮೈಸೂರು(Mysuru): ಬಳಸಿದ ಚಡ್ಡಿಗಳನ್ನು ಬಿಜೆಪಿಯವರು ಕೆಪಿಸಿಸಿ ಕಚೇರಿಗೆ ಕಳುಹಿಸುತ್ತಿದ್ದು, ಅವುಗಳನ್ನು ನಾವು ಇಟ್ಟುಕೊಳ್ಳುವುದಿಲ್ಲ; ಪ್ರಧಾನಿ ನರೇಂದ್ರ ಮೋದಿ ಅವರಿಗೆ ರವಾನಿಸುತ್ತೇವೆ ಎಂದು ಕೆಪಿಸಿಸಿ ವಕ್ತಾರರೂ ಆಗಿರುವ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.
ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಚಡ್ಡಿ ಸಂಗ್ರಹ ಅಭಿಯಾನವನ್ನು ಬೀದರ್‌ನಿಂದ ಚಾಮರಾಜನಗರವರೆಗೂ ನಡೆಸಲಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಆ ಪಕ್ಷದ ನಾಯಕರೆಲ್ಲರೂ ಪಾಲ್ಗೊಳ್ಳಲಿ. ಅಧಿಕೃತವಾಗಿಯೇ ಆ ಕಾರ್ಯಕ್ರಮ ಮಾಡಲಿ. ಜನರೇ ಅವರ ಮುಖಕ್ಕೆ ಉಗಿಯುತ್ತಾರೆ ಎಂದು ತಿಳಿಸಿದರು.
ನಾವು ಆರ್‌ಎಸ್‌ಎಸ್ ಚಡ್ಡಿ ಬಗ್ಗೆ ಮಾತನಾಡಿದರೆ, ಬಿಜೆಪಿಯವರ ಬುಡಕ್ಕೇಕೆ ಬೆಂಕಿ ಬಿದ್ದಿದೆ? ಅವರೇಕೆ ಪ್ರತಿಕ್ರಿಯೆ ಕೊಡುತ್ತಿದ್ದಾರೆ ಎಂದು ಕೇಳಿದರು.
ಚಡ್ಡಿ ಹೊರುವ ಕಾರ್ಯವನ್ನು ಬಿಜೆಪಿಯವರು ಪರಿಶಿಷ್ಟ ಜಾತಿ, ಪಂಗಡದ ಮೋರ್ಚಾದವರಿಂದಲೇ ನಡೆಸಿದ್ದೇಕೆ? ಪರಿಶಿಷ್ಟರ ಹಣ ಬಳಸದಿದ್ದಾಗ, ಅವರ ಅನುಕೂಲಕ್ಕೆ ಜಾರಿಗೊಳಿಸಿದ್ದ ಯೋಜನೆಗಳನ್ನು ಸ್ಥಗಿತಗೊಳಿಸಿದಾಗ ರಕ್ತ ಕುದಿಯಲಿಲ್ಲವೇಕೆ? ಎಂದು ಪ್ರಶ್ನಿಸಿದ ಅವರು, ಮುಖ್ಯಮಂತ್ರಿಯವರೇ ಆರ್‌ಎಸ್‌ಎಸ್‌ನವರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದೀರೇಕೆ? ಪ್ರಗತಿಪರ ಮನೋಭಾವದ ನೀವು ಇಷ್ಟೊಂದು ಅಸಹಾಯಕ ಆದಿರೇಕೆ ಎಂದು ಪ್ರಶ್ನಿಸಿದರು.
ಪಠ್ಯಪುಸ್ತಕದಲ್ಲಿ ಸುಳ್ಳುಗಳನ್ನು ಹೇಳಿ, ತಮ್ಮ ವಿಚಾರಗಳನ್ನು ತುಂಬಿ ಶಾಲಾ ಹಂತದಿಂದಲೇ ಕೇಡರ್ ತಯಾರಿಸುವುದಕ್ಕೆ ಬಿಜೆಪಿ ಮುಂದಾಗಿದೆ. ಮುಖ್ಯಮಂತ್ರಿಯವರೇ, ಕುರ್ಚಿ ಉಳಿಸಿಕೊಳ್ಳಲು ಮಕ್ಕಳ ಭವಿಷ್ಯ ಹಾಳು ಮಾಡಬೇಡಿ. ರೋಹಿತ್ ಚಕ್ರತೀರ್ಥ ಸಮಿತಿಯ ಪುಸ್ತಕಗಳನ್ನು ವಾಪಸ್ ಪಡೆದು, ಹಳೆಯ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ಕೊಡಬೇಕು. ಪಠ್ಯಪುಸ್ತಕ ಪರಿಷ್ಕರಣೆಗೆ ನಮ್ಮ ವಿರೋಧವಿಲ್ಲ. ಕಾಲಕಾಲಕ್ಕೆ ಅದು ನಡೆಯಬೇಕು. ಆದರೆ, ಅದಕ್ಕೆ ಒಳ್ಳೆಯ ಸಮಿತಿ ರಚಿಸಬೇಕು ಎಂದು ಹೇಳಿದರು.
ಬಿಜೆಪಿಯವರಿಗೆ ಅಷ್ಟೊಂದು ಪ್ರೇಮವಿದ್ದರೆ ಆರ್‌ಎಸ್‌ಎಸ್ ಬಗ್ಗೆ ಪ್ರತ್ಯೇಕ ಪಠ್ಯಪುಸ್ತಕವನ್ನೇ ಮಾಡಲಿ. ಆದರೆ, ಅದರಲ್ಲಿ ವಾಸ್ತವಾಂಶ ಹಾಗೂ ಸತ್ಯವನ್ನು ತಿಳಿಸಲಿ ಎಂದು ಸವಾಲೆಸೆದರು.
ದೇಶದ್ರೋಹಿಗಳು ಕಾಂಗ್ರೆಸ್‌ನವರೋ, ಬಿಜೆಪಿಯವರೋ ಎನ್ನುವುದು ಜನರಿಗೆ ತಿಳಿಯಲಿ. ಪಠ್ಯಪುಸ್ತಕಗಳ ಮೂಲಕ ಮನುಸ್ಮೃತಿ ಜಾರಿಗೆ ನಮ್ಮ ವಿರೋಧವಿದೆ. ವೈಜ್ಞಾನಿಕ ಮನೋಭಾವ ನಾಶಗೊಳಿಸುವುದು ಸರಿಯಲ್ಲ ಎಂದು ತಿಳಿಸಿದರು.