ಬೆಳಗಾವಿ (Belgaum): ರಾಷ್ಟ್ರ ಲಾಂಛನದ ದುರ್ಬಳಕೆ ಆರೋಪದ ಮೇಲೆ ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಅವರಿಗೆ ನೋಟಿಸ್ ಜಾರಿಗೊಳಿಸಲಾಗಿದೆ.
ಬಸವರಾಜ ಪಥ ಎಂಬ ಪುಸ್ತಕದ ಮುಖ ಪುಟದ ಮೇಲೆ ರಾಷ್ಟ್ರೀಯ ಲಾಂಛನ ಬಳಸಿದ ಮತ್ತು ಪರಿಷತ್ ಸಭಾಪತಿ ಪೀಠದ ದುರ್ಬಳಕೆ ಮಾಡಿದ ಆರೋಪದ ಮೇಲೆ ಹೊರಟ್ಟಿ ಅವರಿಗೆ ಬೆಳಗಾವಿ ಪ್ರಾದೇಶಿಕ ಆಯುಕ್ತರು ನೋಟಿಸ್ ಜಾರಿ ಮಾಡಿದ್ದಾರೆ.
ನೋಟಿಸ್ ಕುರಿತು ಬಸವರಾಜ ಹೊರಟ್ಟಿಯವರಿಂದ ಸ್ಪಷ್ಟನೆ ಬಂದ ನಂತರ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ.
ಬೆಳಗಾವಿಯ ಜ್ಯೋತಿ ಕಾಲೇಜಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಾದೇಶಿಕ ಆಯುಕ್ತರು, ಪುಸ್ತಕದ ಮುಖಪುಟದ ಮೇಲೆ ರಾಷ್ಟ್ರ ಲಾಂಛನ ಹಾಗೂ ಪರಿಷತ್ತಿನ ಸಭಾಪತಿ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಹೊರಟ್ಟಿಯವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ಹೇಳಿದರು. ರಾಜ್ಯ ಇಂಟರ್ ಮೀಡಿಯೇಟ್ ಶಾಲಾ ನೌಕರರ ಸಂಘದಿಂದ ಕನ್ನಡದಲ್ಲಿ ಬಸವರಾಜ ಪಥವನ್ನು ಪ್ರಕಟಿಸಲಾಗಿದೆ.