ಮೈಸೂರು: ನರೇಗಾ ಕೂಲಿ ಶಿಕ್ಷಣಕ್ಕೆ ನೆರವಾಯಿತೆಂದ ನಿರುದ್ಯೋಗಿ ವಿದ್ಯಾರ್ಥಿಗೆ ಕೂಲಿ ಹೆಚ್ಚಳ ಮತ್ತಷ್ಟು ಕೂಲಿ ಮಾಡಲು ಪ್ರೇರಣೆ ನೀಡಿದ್ದರೆ, ನಗರದತ್ತ ಮುಖ ಮಾಡಿದ್ದ ಮಹಿಳೆಗೆ ಕೂಲಿ ಹೆಚ್ಚಳ ಗ್ರಾಮದಲ್ಲೇ ಕೂಲಿ ಹುಡುಕುವಂತೆ ಮಾಡಿದೆ. ಹೀಗೆ ನರೇಗಾ ಕೂಲಿಯಲ್ಲಿ ೨೧ ರೂ.ಗಳ ಏರಿಕೆ ಮಾಡಿರುವುದು ಮೈಸೂರಿನ ನರೇಗಾ ಕೂಲಿ ಕಾರ್ಮಿಕರಲ್ಲಿ ಒಂದಿಲ್ಲೊಂದು ಸಂತಸ ಹೆಚ್ಚು ಮಾಡಿದೆ.
ಕೂಲಿ ಹೆಚ್ಚಳ ಕುರಿತು ಮೈಸೂರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಯುಕೇಶ್‌ಕುಮಾರ್ ಮಾತನಾಡಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮೀಣ ಭಾಗದ ಅಕುಶಲ ಕೂಲಿ ಕೆಲಸ ಮಾಡುವ ಕೂಲಿಕಾರರ ದಿನಗೂಲಿ ದರವನ್ನು ೩೪೯ ರಿಂದ ೩೭೦ ರೂ.ಗಳಿಗೆ ಹೆಚ್ಚಳ ಮಾಡಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮಂತ್ರಾಲಯವು ಆದೇಶ ಹೊರಡಿಸಿದೆ ಎಂದು ತಿಳಿಸಿದ್ದಾರೆ.
ದಿನಗೂಲಿ ೨೧ ರೂ. ಹೆಚ್ಚಳ: ೨೦೨೪-೨೫ನೇ ಸಾಲಿನಲ್ಲಿ ೩೪೯ ರೂ. ಗಳಿಂದ ಕೂಲಿಯನ್ನು ೨೦೨೫-೨೬ನೇ ಸಾಲಿನಲ್ಲಿ ೩೭೦ ರೂ.ಗಳಿಗೆ ಕೂಲಿ ಹೆಚ್ಚಳ ಮಾಡಿದೆ. ಏ.೧ರಿಂದ ೩೭೦ ರೂ.ಗಳ ಕೂಲಿ ಜಾರಿಯಲ್ಲಿರುತ್ತದೆ. ಅರ್ಹ ಮತ್ತು ನೊಂದಾಯಿತ ಕೂಲಿಕಾರ್ಮಿಕರು ಸೌಲಭ್ಯವನ್ನು ಪಡೆದುಕೊಳ್ಳಬಹುದು. ಮ-ನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶ ಪ್ರತಿ ಅರ್ಹ ಕುಟುಂಬಕ್ಕೆ ಆರ್ಥಿಕ ವರ್ಷದಲ್ಲಿ ೧೦೦ ದಿನಗಳ ಕೂಲಿ ಕೆಲಸದ ಖಾತ್ರಿ ನೀಡಿದೆ. ಒಂದು ಕುಟುಂಬ ನೂರು ದಿನ ಕೆಲಸ ಮಾಡಿದರೆ ೩೭೦೦೦ ರೂ.ಗಳನ್ನು ಪಡೆದುಕೊಳ್ಳಬಹುದು. ಗಂಡು ಹೆಣ್ಣಿಗೆ ದಿನಕ್ಕೆ ೩೭೦ ರೂ.ಗಳಸಮಾನ ಕೂಲಿ ಪಾವತಿಸಲಾಗುತ್ತಿದೆ ಎಂದು ತಿಳಿಸಿದರು.














