ಮನೆ ಅಪರಾಧ ಜಮ್ಮು ಕಾಶ್ಮೀರದ ಕಿಶ್ತ್ವಾರ್ ಎನ್‌ಕೌಂಟರ್‌ನಲ್ಲಿ ಇಬ್ಬರು ಪಾಕ್ ಉಗ್ರರ ಹತ್ಯೆ: ಸೇನಾಧಿಕಾರಿ ಹುತಾತ್ಮ

ಜಮ್ಮು ಕಾಶ್ಮೀರದ ಕಿಶ್ತ್ವಾರ್ ಎನ್‌ಕೌಂಟರ್‌ನಲ್ಲಿ ಇಬ್ಬರು ಪಾಕ್ ಉಗ್ರರ ಹತ್ಯೆ: ಸೇನಾಧಿಕಾರಿ ಹುತಾತ್ಮ

0

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಹಿಮಾವೃತ ಪ್ರದೇಶದಲ್ಲಿ ಭಾರತೀಯ ಸೇನೆಯು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ. ಗುಂಡಿನ ಚಕಮಕಿಯಲ್ಲಿ ಭಾರತೀಯ ಸೇನೆಯ ಜೂನಿಯರ್ ಕಮಿಷನ್ಡ್ ಶ್ರೇಣಿಯ ಅಧಿಕಾರಿ(ಜೆಸಿಒ) ಹುತಾತ್ಮರಾಗಿದ್ದಾರೆ ಎಂದು ಸೇನಾಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಶನಿವಾರ ಗುಂಡಿನ ಚಕಮಕಿಯಲ್ಲಿ ಹತರಾದ ಭಯೋತ್ಪಾದಕರು ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ (ಜೆಇಎಂ) ಸಂಘಟನೆಗೆ ಸೇರಿದವರಾಗಿದ್ದಾರೆ. ಎನ್‌ಕೌಂಟರ್‌ನಲ್ಲಿ ಕಳೆದ ಒಂದು ವರ್ಷದಿಂದ ಚೆನಾಬ್ ಕಣಿವೆ ಪ್ರದೇಶದಲ್ಲಿ ಸಕ್ರಿಯನಾಗಿದ್ದ ಉನ್ನತ ಕಮಾಂಡರ್ ಸೈಫುಲ್ಲಾ ಕೂಡ ಸೇರಿದ್ದಾನೆ ಎಂದು ಅಧಿಕೃತ ಮೂಲಗಳಿಂದ ತಿಳಿದುಬಂದಿದೆ. ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸೇನೆಯ ಜಮ್ಮು ಮೂಲದ ವೈಟ್ ನೈಟ್ ಕಾರ್ಪ್ಸ್, “ಕಿಶ್ತ್ವಾರ್‌ನ ಛಾತ್ರುನಲ್ಲಿ ನಡೆಯುತ್ತಿರುವ ಕಾರ್ಯಾಚರಣೆಗಳಲ್ಲಿ, ಪ್ರತಿಕೂಲ ಹವಾಮಾನದ ಹೊರತಾಗಿಯೂ, ಇನ್ನೂ ಇಬ್ಬರು ಪಾಕಿಸ್ತಾನಿ ಭಯೋತ್ಪಾದಕರನ್ನು ಕೊಲ್ಲಲಾಗಿದೆ. ಒಂದು ಎಕೆ47 ಮತ್ತು ಒಂದು ಎಂ 4 ರೈಫಲ್ ಸೇರಿದಂತೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ” ಎಂದು ತಿಳಿಸಿದೆ.