ಮನೆ Uncategorized ಜಾತಿ ಗಣತಿ: ತೀರ್ಮಾನ ಕೈಗೊಳ್ಳದ ಸಚಿವ ಸಂಪುಟ: ಮುಂದಿನ ಸಭೆಯಲ್ಲಿ ಚರ್ಚೆ ಮುಂದುವರಿಕೆ

ಜಾತಿ ಗಣತಿ: ತೀರ್ಮಾನ ಕೈಗೊಳ್ಳದ ಸಚಿವ ಸಂಪುಟ: ಮುಂದಿನ ಸಭೆಯಲ್ಲಿ ಚರ್ಚೆ ಮುಂದುವರಿಕೆ

0

ಬೆಂಗಳೂರು: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ- 2015 (ಜಾತಿ ಗಣತಿ) ವರದಿ ಕುರಿತು ಚರ್ಚಿಸಲು ಇಂದು ಸಂಜೆ ಕರೆಯಲಾಗಿದ್ದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಯಾವುದೇ ಅಂತಿಮ ನಿರ್ಣಯ ಕೈಗೊಂಡಿಲ್ಲ. ಲಿಖಿತ ರೂಪದಲ್ಲಿ ತಮ್ಮ ಅಭಿಪ್ರಾಯಗಳನ್ನು ತಿಳಿಸುವಂತೆ ಸಚಿವರಿಗೆ ಸಲಹೆ ನೀಡಲಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಅನೇಕ ಸಚಿವರು ಹೇಳಿದ್ದಾರೆ.

ಜಾತಿಗಣತಿ ಕುರಿತು ಯಾವುದೇ ತೀರ್ಮಾನಕ್ಕೆ ಬಾರದೆ ಸಚಿವ ಸಂಪುಟ ಸಭೆ ಮುಂದೂಡಲಾಗಿದೆ. ಮುಂದಿನ ಸಭೆಯಲ್ಲಿ ಚರ್ಚಿಸುವುದಾಗಿ ತಿಳಿದು ಬಂದಿದೆ.  

ಈ ವರದಿಯನ್ನು ಹಿಂದುಳಿದ ವರ್ಗಗಳ ಆಯೋಗದ ಹಿಂದಿನ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರು ಸರ್ಕಾರಕ್ಕೆ ಸಲ್ಲಿಸಿದ್ದರು. ಈ ವರದಿಯನ್ನು ಏಪ್ರಿಲ್ 11ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಲಾಗಿತ್ತು.

ಆಯೋಗದ ಶಿಫಾರಸಿನಂತೆ ಹಾಲಿ ಜಾರಿಯಲ್ಲಿರುವ ಹಿಂದುಳಿದ ವರ್ಗಗಳ ಪ್ರವರ್ಗವಾರು ಮೀಸಲಾತಿ ಪ್ರಮಾಣವನ್ನು ಶೇ. 32 ರಿಂದ ಶೇ 51ಕ್ಕೆ ಹೆಚ್ಚಿಸಲು ಅಂಗೀಕಾರ ನೀಡಬೇಕು. ಇದಕ್ಕೆ ಕೇಂದ್ರ ಸರ್ಕಾರದ ಒಪ್ಪಿಗೆ ಪಡೆಯಬೇಕೆಂಬ ಈ ಪ್ರಸ್ತಾವವನ್ನು ಸಚಿವ ಸಂಪುಟ ಸಭೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮಂಡಿಸಿದೆ ಎಂದು ತಿಳಿದು ಬಂದಿದೆ.

ಜಾತಿ ಗಣತಿಗೆ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯದ ಸಚಿವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಮುಂದೆಯೂ ಅವರ ವಿರೋಧ ಮುಂದುವರೆಯಲಿದೆ. ಹಿಂದುಳಿದ ದಲಿತ ವರ್ಗಗಳ ಸಚಿವರು ವರದಿ ಜಾರಿಗೆ ಆಗ್ರಹಪಡಿಸುತ್ತಿದ್ದಾರೆ. ಅಂತಿಮವಾಗಿ, ಅಧ್ಯಯನ ವರದಿಯ ಪರಾಮರ್ಶೆಗೆ ನಿವೃತ್ತ ನ್ಯಾಯಮೂರ್ತಿಯ ನೇತೃತ್ವದಲ್ಲಿ ಸಮಿತಿ ಅಥವಾ ಸಚಿವ ಸಂಪುಟ ಉಪ ಸಮಿತಿ ರಚಿಸುವ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.