ಕೋಲಾರ : ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಪೂಜಾರಹಳ್ಳಿ ಗ್ರಾಮದಲ್ಲಿ ಹಣದ ಆಸೆ ಮತ್ತು ಜಿದ್ದಿನ ಆಟ ಯುವಕನ ಪ್ರಾಣವನ್ನೇ ಬಲಿಯಾಗಿ ತೆಗೆದುಕೊಂಡ ಘಟನೆಯೊಂದು ಸಂಭವಿಸಿದೆ. ಒಂದು ವರ್ಷದ ಹಿಂದಷ್ಟೇ ಮದುವೆ ಮಾಡಿಕೊಂಡಿದ್ದ ಕಾರ್ತಿಕ್ (21) ಎಂಬ ಯುವಕ, ಮದ್ಯ ಸೇವನೆ ಬೆಟ್ಟಿಂಗ್ನಲ್ಲಿ ಪಾಲ್ಗೊಂಡು ಬದುಕು ಕಳೆದುಕೊಂಡ ಹೃದಯವಿದ್ರಾವಕ ಘಟನೆ ಇದಾಗಿದೆ.
ಪೂಜಾರಹಳ್ಳಿ ಗ್ರಾಮದ ವೆಂಕಟರೆಡ್ಡಿ, ಸುಬ್ರಮಣಿ ಹಾಗೂ ಇನ್ನೂ ಮೂವರು ಸ್ನೇಹಿತರೊಂದಿಗೆ ಕಾರ್ತಿಕ್ ಬೆಟ್ಟಿಂಗ್ ಮಾಡಿದ್ದನು. ಶರತ್ತು ಏನೆಂದರೆ, ಐದು ಬಾಟಲ್ ಮದ್ಯವನ್ನು ನೀರು ಬೆರೆಸದೇ ಕುಡಿದು ತೋರಿಸಬೇಕೆಂಬುದು. ಈ ಬಾಜಿಯ ಗೆಲುವಿಗೆ 10 ಸಾವಿರ ರೂಪಾಯಿ ಬಹುಮಾನವಿತ್ತು. ಕಾರ್ತಿಕ್ ಜಿದ್ದಿಗೆ ಬಿದ್ದು, ಒಂದೂ ಹನಿ ನೀರು ಸೇರಿಸದೆ ಐದು ಬಾಟಲಿ ಮದ್ಯವನ್ನು ಗಟಗಟನೆ ಕುಡಿದನು. ಆದರೆ, ಅತಿಯಾದ ಮದ್ಯದ ಸೇವನೆಯಿಂದ ಕಾರ್ತಿಕ್ ಆರೋಗ್ಯ ಕ್ಷೀಣತೆಯಾಗತೊಡಗಿತು. ತಕ್ಷಣವೇ ಅವನು ತೀವ್ರ ಅಸ್ವಸ್ಥನಾಗಿ “ನನ್ನ ಜೀವ ಉಳಿಸಿ” ಎಂದು ಗೆಳೆಯರ ಬಳಿ ವಿನಂತಿಸಿದನು. ಆತುರದಲ್ಲಿ ಸ್ನೇಹಿತರು ಕಾರ್ತಿಕನ್ನು ಮುಳಬಾಗಿಲಿನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಾರ್ತಿಕ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದನು.
ಕಾರ್ತಿಕ್ ಮದುವೆ ಮಾಡಿಕೊಂಡಿದ್ದು ಕೇವಲ ಒಂದು ವರ್ಷದ ಹಿಂದಷ್ಟೇ. ಅವನ ಗರ್ಭಿಣಿ ಪತ್ನಿಯನ್ನು ತವರು ಮನೆಗೆ ಕಳುಹಿಸಿದ್ದು, ಎಣ್ಣೆಗೆ ದಾಸನಾಗಿದ್ದ. ತವರು ಮನೆ ಸೇರಿದ್ದ ಪತ್ನಿ ಕಳೆದ 8 ದಿನಗಳ ಹಿಂದಷ್ಟೇ ಮಗುವಿಗೆ ಜನ್ಮ ನೀಡಿದ್ದಳು. ತಂದೆಯ ಪ್ರೀತಿಯ ಅರಿವೇ ಇಲ್ಲದ ಮಗುವಿಗೆ ಈಗ ಅಪ್ಪನ ನೆರವಿಲ್ಲದೆ ಬದುಕಬೇಕಾದ ದುಃಖದ ಸ್ಥಿತಿ ನಿರ್ಮಾಣವಾಗಿದೆ. ಕಾರ್ತಿಕ್ ಹೆಂಡತಿ ಚಿಕ್ಕ ವಯಸ್ಸಿನಲ್ಲಿಯೇ ವಿಧವೆಯಾಗಿರುವುದು ಕುಟುಂಬವನ್ನು ಆರ್ಥಿಕ ಮತ್ತು ಮಾನಸಿಕವಾಗಿ ಬೆದರುವಂತೆ ಮಾಡಿದೆ.
ಈ ದುರಂತದ ಹಿನ್ನೆಲೆಯಲ್ಲಿ ಕಾರ್ತಿಕ್ ಕುಟುಂಬಸ್ಥರು ವೆಂಕಟರೆಡ್ಡಿ, ಸುಬ್ರಮಣಿ ಮತ್ತು ಇನ್ನೂ ನಾಲ್ವರ ವಿರುದ್ಧ ನಂಗಲಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪೊಲೀಸರು ವೆಂಕಟರೆಡ್ಡಿ ಮತ್ತು ಸುಬ್ರಮಣಿಯನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರೆದಿದೆ.














