ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲದಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದೆ. ಸ್ಥಳೀಯ ಯುವಕ ದುಷ್ಯಂತ, ಮಹಿಳಾ ಪಿಎಸ್ಐ ವರ್ಷ ಅವರ ಕಿರುಕುಳ ಮತ್ತು ಧಮ್ಕಿಗೆ ಮದ್ಯದಲ್ಲಿ ಡೊಮ್ಯಾಕ್ಸ್ ಮಿಕ್ಸ್ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಘಟನೆಯು ಮಂಗಳವಾರ ಬೆಳಕಿಗೆ ಬಂದಿದೆ.
ಮಾಹಿತಿಯ ಪ್ರಕಾರ, ಕೊಳ್ಳೇಗಾಲ ಠಾಣೆಯ ಪಿಎಸ್ಐ ವರ್ಷ ವಿರುದ್ದ ಹಲವು ಗಂಭೀರ ಆರೋಪಗಳು ಕೇಳಿಬಂದಿದ್ದು, ಪದೇಪದೇ ಯುವಕ ದುಷ್ಯಂತನನ್ನು ಠಾಣೆಗೆ ಕರೆಸಿ ಬೆದರಿಕೆ ಹಾಕಲಾಗಿದೆ. ಇದಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ, ಹಣ ನೀಡದಿದ್ದರೆ ರೌಡಿ ಶೀರ್ಷಿಕೆ ಹಾಕಿಸುವುದಾಗಿ ಧಮ್ಕಿ ನೀಡಲಾಗಿದೆ ಎಂಬ ಆರೋಪ ದುಷ್ಯಂತನ ಕುಟುಂಬಸ್ಥರಿಂದ ಕೇಳಿಬರುತ್ತಿದೆ.
ನಿನ್ನೆಯ ದಿನವೂ ಪಿಎಸ್ಐ ವರ್ಷ ದುಷ್ಯಂತನ ಮನೆಗೆ ಹೋಗಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂಬುದೂ ವರದಿಯಾಗಿದೆ. ಈ ಅವಮಾನ ಮತ್ತು ನಿರಂತರ ಮಾನಸಿಕ ಒತ್ತಡದಿಂದ ಬೇಸತ್ತ ದುಷ್ಯಂತ, ಮದ್ಯದ ಜೊತೆ ವಿಷಕಾರಿ ಡೊಮ್ಯಾಕ್ಸ್ ಮಿಕ್ಸ್ ಮಾಡಿ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದನು. ತಕ್ಷಣವೇ ಆತನ್ನ ಸಿಮ್ಸ್ ಆಸ್ಪತ್ರೆಗೆ ಸೇರಿಸಲಾಯಿತು, ಮತ್ತು ತೀವ್ರ ಚಿಕಿತ್ಸಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆಯ ಮತ್ತೊಂದು ಪ್ರಮುಖ ಬೆಳವಣಿಗೆಯಲ್ಲಿ, ಪಿಎಸ್ಐ ವರ್ಷ ಬಾರ್‌ನಲ್ಲಿ ನಡೆದಿದ್ದ ಒಂದು ಹಳೆಯ ಗಲಾಟೆ ವಿಡಿಯೋವನ್ನು ಹರಿಬಿಟ್ಟಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಏಪ್ರಿಲ್ 8 ರಂದು ದುಷ್ಯಂತ ಬಾರ್‌ನಲ್ಲಿ ಬಿಲ್ ಬಾಕಿ ವಿಚಾರಕ್ಕೆ ಕ್ಯಾಶಿಯರ್ ಜತೆ ಗಲಾಟೆ ಮಾಡಿಕೊಂಡಿದ್ದು, ಆ ಸಮಯದಲ್ಲಿ ರಾಜಿ ಸಂಧಾನವಾಗಿತ್ತು ಮತ್ತು ಯಾವುದೇ ದೂರು ದಾಖಲಾಗಲಿಲ್ಲ. ಆದರೆ ಇದೀಗ ಆ ದೃಶ್ಯಾವಳಿಗಳನ್ನು ಪಿಎಸ್ಐ ವರ್ಷ ಬಳಸಿಕೊಂಡು ದುಷ್ಯಂತನ ವಿರುದ್ಧ ಮತ್ತಷ್ಟು ಒತ್ತಡ ತರುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಈ ಎಲ್ಲಾ ಬೆಳವಣಿಗೆಯ ಹಿನ್ನೆಲೆಯಲ್ಲಿ, ದುಷ್ಯಂತನ ಕುಟುಂಬಸ್ಥರು ಹಾಗೂ ಹಿತೈಷಿಗಳು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಪಿಎಸ್ಐ ವರ್ಷ ವಿರುದ್ಧ ದೂರು ಸಲ್ಲಿಸಿದ್ದಾರೆ. ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿರುವ ಕುಟುಂಬಸ್ಥರು, ದುಷ್ಯಂತನಿಗೆ ನ್ಯಾಯ ದೊರಕಿಸಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.














