ಮಂಗಳೂರು: ಸಮಾಜ ಹಾಗೂ ಧರ್ಮ ಸಂಬಂಧಿತ ವಿಷಯಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿದ ವಿವಾದಾತ್ಮಕ ಪೋಸ್ಟ್ಗಳ ಹಿನ್ನೆಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಡಯೆಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಯುವತಿ ಅಫೀಫ ಫಾರೀಮಾ ಕೆಲಸದಿಂದ ವಜಾಗೊಂಡಿರುವ ಘಟನೆ ನಡೆದಿದೆ. ಆಕೆಯ ವಿರುದ್ಧ ಪೊಲೀಸರು ಎಫ್ಐಆರ್ ಕೂಡ ದಾಖಲಿಸಿದ್ದು, ವಿಷಯ ಸಾಮಾಜಿಕವಾಗಿ ಭಾರೀ ಪ್ರತಿಕ್ರಿಯೆಗೊಳಗಾಗಿದೆ.
ಅಫೀಫ ಫಾರೀಮಾ ಎಂಬ ಈ ಡಯೆಟಿಷಿಯನ್ ಸೋಷಿಯಲ್ ಮೀಡಿಯಾದಲ್ಲಿ ಹಲವಾರು ವಿವಾದಾತ್ಮಕ ಪೋಸ್ಟ್ಗಳನ್ನು ಹಾಕಿದ್ದು, ಅವುಗಳಲ್ಲಿ ಹಿಂದೂ ಧರ್ಮ ಹಾಗೂ ಭಾರತ ದೇಶದ ವಿರುದ್ಧವಾದ ಆಕ್ಷೇಪಾರ್ಹ ಮತ್ತು ಅವಮಾನಕಾರಿ ಹೇಳಿಕೆಗಳು ಇದ್ದವು. ಅವುಗಳಲ್ಲಿ “help stinky hindus are behind me” (ಕಾಪಾಡಿ, ಕೊಳಕು ಹಿಂದೂಗಳು ನನ್ನ ಹಿಂದೆ ಬಿದ್ದಿದ್ದಾರೆ), “Am I Indian? Yes. Do I hate India? Yes.” (ಹೌದು, ನಾನು ಭಾರತೀಯಳು.. ಹೌದು, ನಾನು ಭಾರತವನ್ನು ದ್ವೇಷಿಸುತ್ತೇನೆ) ಎಂದು ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದರು.
ಈ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ನಂತರ ತೀವ್ರ ಆಕ್ರೋಶ ಎಬ್ಬಿಸಿಕೊಂಡಿದ್ದು, ಆಕೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂಬ ಸಾರ್ವಜನಿಕ ಒತ್ತಾಯ ಹೆಚ್ಚಾಯಿತು. ವಿವಿಧ ಸಾಮಾಜಿಕ ಸಂಘಟನೆಗಳು ಹಾಗೂ ವ್ಯಕ್ತಿಗಳು ಆಸ್ಪತ್ರೆ ಆಡಳಿತ ಮಂಡಳಿಗೆ ದೂರು ನೀಡಿದ್ದು, ಪರಿಣಾಮವಾಗಿ ಸಂಸ್ಥೆಯ ಹ್ಯುಮನ್ ರಿಸೋರ್ಸ್ ವಿಭಾಗದ ಅಧಿಕಾರಿಗಳು ತ್ವರಿತ ಕ್ರಮವಾಗಿ ಅಫೀಫ ಫಾರೀಮಾ ಅವರನ್ನು ಕೆಲಸದಿಂದ ವಜಾಗೊಳಿಸಿದ್ದಾರೆ.
ಅಲ್ಲದೇ, ಈ ಘಟನೆಯ ಕುರಿತು ಮಂಗಳೂರು ನಗರದ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಆಸ್ಪತ್ರೆಯ HR ಅಧಿಕಾರಿ ಮೊಹಮ್ಮದ್ ಅಸ್ಲಾಂ ನೀಡಿದ ದೂರಿನ ಆಧಾರದ ಮೇಲೆ, ಅಫೀಫ ವಿರುದ್ಧ BNS ಕಲಂ 196(1)(a) ಮತ್ತು 353(2) ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.
ಅಫೀಫ ಫಾರೀಮಾ ವಿರುದ್ಧದ ಆರೋಪಗಳು ದೇಶದ ಅಖಂಡತೆ ಹಾಗೂ ಸಮುದಾಯದ ನಡುವೆ ಅಸಹಿಷ್ಣುತೆ ಹುಟ್ಟಿಸುವಂತಿರುವುದರಿಂದ, ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಸೂಕ್ತ ತನಿಖೆ ಕೈಗೊಂಡಿದ್ದಾರೆ.














