ಬೆಂಗಳೂರು: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಂತರ ಭಾರತ–ಪಾಕಿಸ್ತಾನ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಯಾವುದೇ ಕ್ಷಣದಲ್ಲಿ ಯುದ್ಧ ಸ್ಫೋಟಿಸಬಹುದಾದ ಸ್ಥಿತಿಯಾಗಿದೆ. ಈ ಹಿನ್ನಲೆಯಲ್ಲಿ ಭಾರತೀಯ ಸೈನಿಕರಿಗೆ ಶಕ್ತಿ, ಧೈರ್ಯ ಮತ್ತು ಯಶಸ್ಸು ಸಿಗಲೆಂದು ಶ್ರೀರಾಮಸೇನೆಯಿಂದ ರಾಜಾಜಿನಗರ ಬಿಬಿಎಂಪಿ ಮೈದಾನದಲ್ಲಿ ಭಕ್ತಿಯಿಂದ ಮಹಾಯಾಗ ನೆರವೇರಿಸಲಾಯಿತು.
ಈ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪರಶುರಾಮ ಯಾಗ, ರಾಮ ಭದ್ರಕ ಯಾಗ, ಮತ್ತು ಸಂಕಲ್ಪ ಯಾಗ ನೆರವೇರಿಸಲಾಯಿತೆಂಬುದೇ ಗಮನಾರ್ಹವಾಗಿದೆ. ಯುದ್ಧ ಸಂಭವಿಸಿದರೆ ಭಾರತೀಯ ಯೋಧರಿಗೆ ಸೋಲಿಲ್ಲದ ಶಕ್ತಿಯೇ ಇರುವಂತೆ ಪ್ರಾರ್ಥಿಸಿ, ಭಕ್ತಿಯಿಂದ ಪರಶುರಾಮನ ಬೃಹತ್ ಕೊಡಲಿಯನ್ನು ಯಾಗಮಂಟಪದ ಮಧ್ಯದಲ್ಲಿ ಸ್ಥಾಪಿಸಿ ಪೂಜೆ ಸಲ್ಲಿಸಲಾಯಿತು.
10 ಗಂಟೆಗಳ ಕಾಲ ಸತತವಾಗಿ ನಡೆದ ಈ ಹೋಮ-ಹವನ-ಯಜ್ಞಗಳಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಗಳು, ಹಿಂದೂ ಮುಖಂಡ ಗಂಗಾಧರ್ ಕುಲಕರ್ಣಿ, ರಾಮಾನಂದ ಶ್ರೀಗಳು ಸೇರಿದಂತೆ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು. ಕಾರ್ಯಕರ್ತರು ಭಕ್ತಿಯಿಂದ ಯಜ್ಞದ ಮೂಲಕ ಸೈನಿಕರಿಗೆ ಆತ್ಮಶಕ್ತಿ ಸಿಗಲೆಂದು ಹರಕೆ ಮಾಡಿದರು.
ಪರಶುರಾಮನ 15 ಅಡಿ ಎತ್ತರದ ಮೂರ್ತಿಯೊಂದಿಗೆ ನಡೆಸಲಾದ ಶೋಭಾಯಾತ್ರೆ ಯಲ್ಲಿ ಭಕ್ತರು ಕೈಯಲ್ಲಿ ಕೊಡಲಿ ಹಿಡಿದು ನಗರವಾಸಿಗಳಿಗೆ ಶಾಂತಿ ಮತ್ತು ಶಕ್ತಿಯ ಸಂದೇಶ ರವಾನಿಸಿದರು. ಯಾತ್ರೆಯು ರಾಜಾಜಿನಗರದ ಪ್ರಮುಖ ಬೀದಿಗಳಲ್ಲಿ ಭಕ್ತಿಯಿಂದ ಸಾಗಿತು.
ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, “ಪೆಹಲ್ಗಾಮ್ ಉಗ್ರ ದಾಳಿಯಲ್ಲಿ ಹುತಾತ್ಮರಾದವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಹಾಗೂ ನಮ್ಮ ಸೈನಿಕರಿಗೆ ಧೈರ್ಯ ತುಂಬಿಸಲು ಈ ಯಾಗವನ್ನು ನಡೆಸುತ್ತಿದ್ದೇವೆ. ದೇಶದ ಒಳಗೂ ಪಾಕಿಸ್ತಾನ ಪರ ಘೋಷಣೆ ಕೂಗುವವರು ಇದ್ದಾರೆ. ಅಂತವರಿಂದ ದೇಶವನ್ನು ರಕ್ಷಿಸಬೇಕಾದ ಹೊಣೆ ನಮ್ಮೆಲ್ಲರ ಮೇಲಿದೆ” ಎಂದು ಹೇಳಿದರು.
ಅದೇ ವೇಳೆ ಅವರು ಕಾಂಗ್ರೆಸ್ ಪಕ್ಷದ ವಿರುದ್ಧ ಕಿಡಿಕಾರಿದರು. “ಸ್ವಾತಂತ್ರ‍್ಯ ಬಂದ ಬಳಿಕ ಕಾಂಗ್ರೆಸ್ ನಿರಂತರವಾಗಿ ಮುಸ್ಲಿಂ ತುಷ್ಟೀಕರಣ ನಡಿಸಿ ಮತಗಳ ಮಾಡುತ್ತಿದೆ. ಅಂತಹ ಪಕ್ಷಕ್ಕೆ ದೇಶದ ತಾತ್ವಿಕ ನೆಲೆಯ ಬಗ್ಗೆ ಎಷ್ಟು ಬೆಲೆ ಇದೆ?” ಎಂದು ಪ್ರಶ್ನಿಸಿದರು.














