ಮನೆ ಸುದ್ದಿ ಜಾಲ ರೇಣುಕ ರಹಿತ ಬಸವಜಯಂತಿ ಆಚರಣೆ ಶಾಮನೂರು ನಿಲುವಿಗೆ ಲಿಂಗಾಯತ ಮಹಾಸಭಾ ಸ್ವಾಗತ : ಸರ್ಕಾರಿ ಕಚೇರಿಯಲ್ಲಿ...

ರೇಣುಕ ರಹಿತ ಬಸವಜಯಂತಿ ಆಚರಣೆ ಶಾಮನೂರು ನಿಲುವಿಗೆ ಲಿಂಗಾಯತ ಮಹಾಸಭಾ ಸ್ವಾಗತ : ಸರ್ಕಾರಿ ಕಚೇರಿಯಲ್ಲಿ ಕಡ್ಡಾಯವಾಗಿ ಆಚರಿಸಲು ಮನವಿ

0

ಮಂಡ್ಯ : ಮಹಾತ್ಮ ಬಸವೇಶ್ವರರ ಜಯಂತಿ ಜೊತೆಯಲ್ಲಿ ಕಾಲ್ಪನಿಕ ಪುರುಷ ರೇಣುಕಾಚಾರ್ಯರ ಜಯಂತಿಯನ್ನು ಆಚರಿಸಬೇಕೆಂಬ ಆದೇಶವನ್ನು ಹಿಂಪಡೆದಿರುವ ಅಖಿಲ ಬಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ನಿಲುವನ್ನು ಲಿಂಗಾಯತ ಮಹಾಸಭಾ ಸ್ವಾಗತಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಸಭಾ ಅಧ್ಯಕ್ಷ ಎಂ.ಎಸ್.ಮಂಜುನಾಥ್, ಶರಣ ಸಮಾಜದಲ್ಲಿ ಕೋಲಾಹಲ ಸೃಷ್ಟಿಸಿದ್ದ ವೀರಶೈವ ಮಹಾಸಭೆಯ ರಾಜ್ಯ ಅಧ್ಯಕ್ಷ ಶಂಕರ ಬಿದರಿ ಅವರಿಗೆ ಬಸವಪ್ರಜ್ಣೆ ಜಾಗೃತವಾಗಿರುವುದು ಸಂತೋಷಕರ ಸಂಗತಿ ಎಂದು ತಿಳಿಸಿದರು. ಬಸವ ಜಯಂತಿಯ ಜೊತೆ ರೇಣುಕಾ ಜಯಂತಿಯನ್ನು ಆಚರಿಸಲು ಆದೇಶಿಸಿ ರಾಜ್ಯಾಧ್ಯಕ್ಷ ಶಂಕರ ಬಿದರಿ ಕಳಿಸಿದ್ದ ಸುತ್ತೋಲೆಯನ್ನು ಅಖಿಲ ಭಾರತ ವೀರಶೈವ ಮಹಾಸಭಾ ಹಿಂದೆ ಪಡೆದು ಇಲ್ಲಿಯತನಕ ಆಚರಿಸುತ್ತಿದ್ದ ರೀತಿಯಲ್ಲೇ ಬಸವ ಜಯಂತಿ ಮಾತ್ರ ಆಚರಿಸುವಂತೆ ತಿಳಿಸಿರುವುದು ಗೊಂದಲ ನಿವಾರಿಸಿದೆ ಎಂದರು.

ಬಿದರಿಯವರ ಸುತ್ತೋಲೆ ಸಮಾಜದ ವಿವಿಧ ಪಂಗಡಗಳ ಮಧ್ಯ ದೊಡ್ಡ ಘರ್ಷಣೆ ಹುಟ್ಟುಹಾಕಿತ್ತು. ನಾವೀಗ ಅದನ್ನು ಮರೆತು ಮುಂದೆ ಒಗ್ಗಟಾಗಿ ನಡೆಯಬೇಕು ಎಂದು ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಡ್ಡಾಯವಾಗಿ ಸರ್ಕಾರಿ ಕಚೇರಿಗಳಲ್ಲಿ ವಿಶ್ವಗುರು ಬಸವಣ್ಣನವರ ಭಾವಚಿತ್ರವನ್ನು ಅಳವಡಿಸಬೇಕೆಂದು ಆದೇಶ ನೀಡಿದ್ದರೂ ಸಹ ಮಂಡ್ಯ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣ, ಪೊಲೀಸ್‌ಠಾಣೆಗಳು, ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಸರ್ಕಾರಿ ಆಸ್ಪತ್ರೆಗಳು, ಸರ್ಕಾರಿ ಶಾಲೆಗಳು ಸೇರಿದಂತೆ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಇದೂವರೆಗೂ ಬಸವಣ್ಣನವರ ಭಾವಚಿತ್ರ ಅಳವಡಿಸದಿರುವುದು ಖಂಡನೀಯ ಎಂದರು.

ಈ ಬಾರಿ ಬಸವಜಯಂತಿಯನ್ನು ಕೇಂದ್ರ ಸರ್ಕಾರ ಆಚರಣೆ ಮಾಡಲು ಮುಂದಾಗಿರುವುದು ಅಭಿನಂದನೀಯ. ಪ್ರಧಾನಿ ಮೋದಿಯವರು ನೂತನ ಸಂಸತ್‌ಭವನದ ಮುಂದೆ ಜಗಜ್ಯೋತಿ ಬಸವೇಶ್ವರರಉ ಪುತ್ಥಳಿಯನ್ನು ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿದರು.

ಜಾತ್ಯಾತೀತ ಬಸವಜಯಂತಿ : ಮಂಡ್ಯ ಜಿಲ್ಲಾಡಳಿತ ಜಾತ್ಯಾತೀತವಾಗಿ ಎಲ್ಲಾ ಸಮುದಾಯದ ಮುಖಂಡರನ್ನು ಪೂರ್ವಭಾವಿ ಸಭೆಗೆ ಆಹ್ವಾನಿಸಿ ಬಸವಜಯಂತಿ ಆಚರಿಸಬೇಗಿತ್ತು. ಆದರೆ, ಒಂದು ಸಮುದಾಯದ ಸಂಘಟನೆಯ ಹೆಸರನ್ನಷ್ಟೇ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿ ಲೋಪವೆಸಗಿದ್ದಾರೆ ಎಂದರು.
ಜಿಲ್ಲಾಧಿಕಾರಿಗಳ ಕಚೇರಿಯಿಂದ ಕಲಾಮಂದಿರದವರೆಗೆ ಪ್ರತಿ ವರ್ಷ ನಡೆಯುತ್ತಿದ್ದ ಬಸವಣ್ಣನವರ ಜಯಂತಿಯ ಮೆರವಣಿಗೆಯನ್ನು ರದ್ದುಗೊಳಿಸಿರುವುದು ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಲಿಂಗಾಯತ ಸಮಾಜದ ಮುಖಂಡರಾದ ಮಲ್ಲಿಕಾರ್ಜುನಪ್ಪ, ಸುಂಡಹಳ್ಳಿ ಸೋಮಶೇಖರ್, ಶರಣರ ಸಂಘಟನೆ ಅಧ್ಯಕ್ಷ ನಂದೀಶ್, ಮೆಣಸ ಗೆರೆ ಶಿವಲಿಂಗಪ್ಪ, ಯೋಗ ಶಿಕ್ಷಕ ಶಿವರುದ್ರಪ್ಪ, ಕೊಕ್ಕರೆಬೆಳ್ಳೂರು ಶಿವಶಂಕರ್ ಮತ್ತಿತರರಿದ್ದರು.