ರಾಮನಗರ: ಕರ್ನಾಟಕದ ಪ್ರಮುಖ ಹೆದ್ದಾರಿಗಳಲ್ಲಿ ಒಂದಾದ ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ ವೇಗೆ ಮತ್ತೊಂದು ಸುಧಾರಣೆಯ ಹಾದಿ ತೆರೆದುಕೊಂಡಿದೆ. ಕೇಂದ್ರ ಸರ್ಕಾರವು ಹೊಸ ಎಂಟ್ರಿ ಮತ್ತು ಎಕ್ಸಿಟ್ ಪಾಯಿಂಟ್ ನಿರ್ಮಾಣಕ್ಕೆ ಅನುಮತಿ ನೀಡಿದ್ದು, ಈ ಯೋಜನೆಯಿಂದ ಸಾರ್ವಜನಿಕರಿಗೆ, ಪ್ರವಾಸಿಗರಿಗೆ ಹಾಗೂ ಸ್ಥಳೀಯ ಅಭಿವೃದ್ಧಿಗೆ ಹೆಚ್ಚಿನ ಅನುಕೂಲ ದೊರೆಯಲಿದೆ. ಈ ಹೊಸ ಎಂಟ್ರಿ-ಎಕ್ಸಿಟ್ ಪಾಯಿಂಟ್ ಅನ್ನು ರಾಮನಗರ-ಚನ್ನಪಟ್ಟಣ ನಡುವಿನ ಕಣ್ವ ಡ್ಯಾಂ ಜಂಕ್ಷನ್ನಲ್ಲಿ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ.
ಈ ಮಹತ್ವದ ಯೋಜನೆಗೆ ಸಂಬಂಧಿಸಿದಂತೆ ಶನಿವಾರ ಸಂಸದ ಡಾ. ಮಂಜುನಾಥ್ ಮತ್ತು ಶಾಸಕ ಸಿ.ಪಿ. ಯೋಗೇಶ್ವರ್ ಅವರು ಸ್ಥಳ ಪರಿಶೀಲನೆ ನಡೆಸಿದರು. ಅವರು ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ಪ್ರಸ್ತಾವಿತ ಜಾಗದ ಆಧಾರದಲ್ಲಿ ಯೋಜನೆಯ ಅನ್ವಯತೆ ಹಾಗೂ ಪರಿಣಾಮಗಳ ಬಗ್ಗೆ ಚರ್ಚಿಸಿದರು.
ಮೊದಲಿಗೆ ಎಂಟ್ರಿ-ಎಕ್ಸಿಟ್ ನಿರ್ಮಾಣಕ್ಕಾಗಿ ಚನ್ನಪಟ್ಟಣದ ರಾಂಪುರದ ಬಳಿಯ ಜಾಗವನ್ನು ಗುರುತಿಸಲಾಗಿತ್ತು. ಆದರೆ ಆ ಪ್ರದೇಶದಲ್ಲಿ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣದಿಂದಾಗಿ ಕಣ್ವ ಜಂಕ್ಷನ್ ಬಳಿಯ ಜಾಗವನ್ನು ಆಯ್ಕೆ ಮಾಡಲಾಗಿದೆ. ಈ ಸ್ಥಳವು ಪ್ರವಾಸೋದ್ಯಮ ದೃಷ್ಠಿಯಿಂದ ಬಹುಪಾಲು ಅನುಕೂಲಕರವಾಗಿದ್ದು, ಕಣ್ವ ಡ್ಯಾಂ, ಕೆಂಗಲ್ ಆಂಜನೇಯ ದೇವಾಲಯ ಮತ್ತು ಹಳೆಯ ಬೆಂಗಳೂರು-ಮೈಸೂರು ಹೆದ್ದಾರಿಗೆ ನೇರ ಸಂಪರ್ಕ ಕಲ್ಪಿಸಲಿದೆ.
ಡಾ. ಮಂಜುನಾಥ್ ಮಾಧ್ಯಮಗಳೊಂದಿಗೆ ಮಾತನಾಡುವ ಸಂದರ್ಭದಲ್ಲಿ, ಸ್ಕೈವಾಕ್ ಕಾಮಗಾರಿಗಳು ಶೀಘ್ರದಲ್ಲೇ ಮೂರು ಪ್ರಮುಖ ಸ್ಥಳಗಳಲ್ಲಿ ಪೂರ್ಣಗೊಳ್ಳಲಿದ್ದು, ಸಾರ್ವಜನಿಕ ಸುರಕ್ಷತೆ ಮತ್ತು ಸುಗಮ ಚಲನೆಯ ಕಡೆಗೊಂದು ಹೆಜ್ಜೆ ಆಗಲಿದೆ ಎಂದು ತಿಳಿಸಿದ್ದಾರೆ. ಜೊತೆಗೆ, ಚನ್ನಪಟ್ಟಣದ ಬಳಿ ‘ಟಾಯ್ಸ್ ಪಾರ್ಕ್’ ಸ್ಥಾಪನೆಗೆ ಜಾಗ ಈಗಾಗಲೇ ಗುರುತಿಸಲಾಗಿದೆ. ಇದು ಸ್ಥಳೀಯ ಉದ್ಯಮ ಮತ್ತು ಪ್ರವಾಸೋದ್ಯಮಕ್ಕೆ ಹೊಸ ಉತ್ಸಾಹ ನೀಡಲಿದೆ.
ಸ್ಥಳ ಪರಿಶೀಲನೆಯ ವೇಳೆಯಲ್ಲಿ ಪಹಲ್ಗಾಮ್ ದಾಳಿಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಂಸದ ಡಾ. ಮಂಜುನಾಥ್, “ಈ ಕ್ಷಣಕ್ಕೆ ಭದ್ರತಾ ವೈಫಲ್ಯಗಳ ವಿರುದ್ಧ ರಾಜಕೀಯ ಚರ್ಚೆ ತಪ್ಪಬೇಕಾಗಿದೆ. ಭಯೋತ್ಪಾದಕರಿಗೆ ತಕ್ಕ ಉತ್ತರ ನೀಡುವುದು ಮುಖ್ಯ. ಯುದ್ಧ ಎಂಬುದು ಸೂಕ್ಷ್ಮ ವಿಷಯ, ಅದನ್ನು ಪ್ರತಿಯೊಬ್ಬರು ಎಲ್ಲೆಂದರಲ್ಲಿ ಚರ್ಚಿಸುವುದು ಸೂಕ್ತವಲ್ಲ,” ಎಂದು ತಿಳಿಸಿದರು.














