ಮಹಾರಾಷ್ಟ್ರ: ತಾಂತ್ರಿಕ ಸಾಧನಗಳ ಗೀಳಿಗೆ ಯುವ ಪೀಳಿಗೆ ತೀವ್ರವಾಗಿ ನಲುಗುತ್ತಿರುವ ನಡುವೆಯೇ, ಅತಿಯಾಗಿ ಮೊಬೈಲ್ ಬಳಸಬೇಡವೆಂದು ಮನೆಯವರು ಹೇಳಿದ ಕಾರಣಕ್ಕೆ ಮನನೊಂದು 20 ವರ್ಷದ ಯುವತಿ 11ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಠಾಣೆ ನಗರದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಸಮೀಕ್ಷಾ ನಾರಾಯಣ ವಡ್ಡಿ ಎಂದು ಗುರುತಿಸಲಾಗಿದೆ. ಸಮೀಕ್ಷಾ ಇತ್ತೀಚಿನ ದಿನಗಳಲ್ಲಿ ರಾತ್ರಿ ಹೊತ್ತು ಮೊಬೈಲ್‌ನಲ್ಲಿ ಅವಧಿ ಮೀರಿದ ಮಾತುಕತೆಯಲ್ಲಿ ತೊಡಗಿಸಿಕೊಂಡಿದ್ದನ್ನು ಗಮನಿಸಿದ ಅವರ ಮನೆಯವರು, ಆಕೆಗೂ ಸಲಹೆ ನೀಡಿ, ಆಕ್ಷೇಪ ವ್ಯಕ್ತಪಡಿಸಿದ್ದರು. ಇದರ ಹಿನ್ನೆಲೆಯಲ್ಲಿ ಮನೆಯವರು ಆಕೆಯಿಂದ ಮೊಬೈಲ್ ತೆಗೆದುಕೊಂಡಿದ್ದಾರೆ. ಈ ನಡೆ ಸಮೀಕ್ಷಾರವರ ಮನಸ್ಸಿಗೆ ಆಘಾತವಾಗಿದ್ದು, ಮನನೊಂದು ತಾನು ವಾಸವಿದ್ದ ಅಪಾರ್ಟ್ಮೆಂಟ್‌ನ 11ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವೈದ್ಯರು ಆಕೆಯನ್ನು ಆಗಲೇ ಮೃತಪಟ್ಟಿದ್ದೆಂದು ಘೋಷಿಸಿದರು.
ಘಟನೆಯ ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣವಾದ ಮನಸ್ಥಿತಿಯ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೋಷಕರು ನೀಡಿದ ಪ್ರಾಥಮಿಕ ಮಾಹಿತಿಯ ಪ್ರಕಾರ, ಮೊಬೈಲ್ ಬಗ್ಗೆ ಉಂಟಾದ ಮನೆಯ ಮಾತು, ಮೊಬೈಲ್ ಕಸಿದುಕೊಳ್ಳುವ ಘಟನೆ ಆಕೆಗೆ ಮಾನಸಿಕವಾಗಿ ಹೊರೆ ತಂದಿರುವ ಸಾಧ್ಯತೆಯಿದೆ ಎಂದು ಶಂಕಿಸಲಾಗಿದೆ.
ಈ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದ್ದು, ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಗೆ ಮೊಬೈಲ್ ಮೇಲೆ ಉಂಟಾಗಿರುವ ಅವಲಂಬನೆಯ ಕುರಿತಾಗಿ ಬಹುತೇಕ ಜನರಲ್ಲಿ ಚಿಂತನೆ ಮೂಡಿಸಿದೆ. ತಾಂತ್ರಿಕ ಸಾಧನಗಳು ಜಗತ್ತನ್ನು ನಿಕಟವಾಗಿ ಹೊಂದಿಸಿದರೂ, ಅದರ ಅತಿಯಾದ ಬಳಕೆಯು ವ್ಯಕ್ತಿಗಳ ಮಾನಸಿಕ ಆರೋಗ್ಯದ ಮೇಲೆ ಹೇಗೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ಸಾಬೀತುಪಡಿಸಿದೆ.














