ಬೆಂಗಳೂರು : ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಹತ್ಯೆ ಕುರಿತು ತೀವ್ರ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಪ್ರತಿಪಕ್ಷ ನಾಯಕ ಆರ್. ಅಶೋಕ್, ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯವೇ ಈ ದುರ್ಘಟನೆಗೆ ಕಾರಣ ಎಂದು ಆರೋಪಿಸಿದ್ದಾರೆ. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಸಂದರ್ಭದಲ್ಲಿಯೇ ಸೂಕ್ತ ಕ್ರಮ ತೆಗೆದುಕೊಂಡಿದ್ದರೆ ಇಂತಹ ಹತ್ಯೆ ನಡೆಯುತ್ತಿರಲಿಲ್ಲ ಎಂದು ಅವರು ಆಕ್ರೋಶಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಆರ್. ಅಶೋಕ್ ಅವರು, “ಸುಹಾಸ್ ಶೆಟ್ಟಿಯ ಹತ್ಯೆ ಮಂಗಳೂರಿನಲ್ಲಿ ಉದ್ವಿಗ್ನ ಸ್ಥಿತಿಯನ್ನುಂಟುಮಾಡಿದ್ದು, ನಗರ ಬಂದ್ ಆಗಿರುವ ಸ್ಥಿತಿಗೆ ತಲುಪಿದೆ. ಈ ಸರಣಿ ಘಟನೆಯ ಹಿಂದೆ ಪಾಪ್ಯುಲರ್ ಫ್ರಂಟ್ನಂತಹ ಸಂಘಟನೆಗಳ ಕೈವಾಡವಿದೆ. ಆದರೆ ಸರ್ಕಾರ ಬಾಯಿಮುಚ್ಚಿಕೊಂಡಂತಿದೆ,” ಎಂದು ತೀವ್ರ ವಾಗ್ದಾಳಿ ನಡೆಸಿದರು.
“2013ರ ಕಾಲದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಮಯದಲ್ಲಿ 36ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರನ್ನು ಕೊಲ್ಲಲಾಗಿತ್ತು. ಅದೇ ಮಾದರಿ ಈಗ ಮರುಕಳಿಸುತ್ತಿದೆ.” ಅವರು ಈ ಹತ್ಯೆಗಳ ಹಿಂದೆ “ಪಾಪ್ಯುಲರ್ ಫ್ರಂಟ್ನಂತಹ ಸಂಘಟನೆಗಳ ವಿರುದ್ಧ ಸರ್ಕಾರ ಕ್ರಮಕೈಗೊಂಡಿಲ್ಲ” ಎಂದು ಟೀಕಿಸಿದರು.
“ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ತಕ್ಷಣವೇ ‘ಪಾಕಿಸ್ತಾನ ಜಿಂದಾಬಾದ್’ ಘೋಷಣೆಗಳು ಕೇಳಿಬರುತ್ತಿವೆ. ಪಾಕ್ ಬಾವುಟ ಪ್ರದರ್ಶನ ಮಾಡುವವರು ಹೆಚ್ಚಾಗಿದ್ದಾರೆ. ಸರ್ಕಾರ ಇದನ್ನು ನಿರ್ಲಕ್ಷ್ಯದಿಂದ ಕಾಣುತ್ತಿದೆ. ಸುಹಾಸ್ ಹತ್ಯೆಗೂ ಪಾಕಿಸ್ತಾನ ಜಿಂದಾಬಾದ್ ಕಾರಣ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಕಿಡಿಕಾರಿದ್ದಾರೆ.
“ಸುಹಾಸ್ ಓಡಾಡುತ್ತಿದ್ದ ಸ್ಥಳಗಳು ಹಾಗೂ ಆತನ ಬಳಿ ಆಯುಧವಿಲ್ಲ ಎಂಬ ಮಾಹಿತಿ ಎಲ್ಲಿ ಸೋರಿತು? ಇದು ಪೋಲೀಸ್ ಇಲಾಖೆಯಿಂದಲೇ ಸೋರಿಕೆಯಾಗಿರಬಹುದೆಂಬ ಗಂಭೀರ ಅನುಮಾನ ನಮ್ಮಲ್ಲಿದೆ,” ನೇಹಾ ಹತ್ಯೆ ಆದಾಗ, ಲವ್ ಜಿಹಾದ್ ಆದಾಗ ಕಠಿಣ ಕ್ರಮ ತೆಗೆದುಕೊಳ್ಳಬೇಕಿತ್ತು. ಆಗ ಕ್ರಮ ಕೈಗೊಳ್ಳದ ಹಿನ್ನೆಲೆ ಈ ಥರ ಕೊಲೆಗಳಾಗುತ್ತಿವೆ. ನಾನು, ವಿಜಯೇಂದ್ರ ಮಂಗಳೂರಿಗೆ ಹೊರಟಿದ್ದೀವಿ, ಪ್ರತಿಭಟನೆಯಲ್ಲಿ ನಾವೂ ಭಾಗವಹಿಸುತ್ತೇವೆ. ಸಿದ್ದರಾಮಯ್ಯ ಸಿಎಂ ಆದ ನಂತರ ಅವರ ನಡೆ ನುಡಿಯೇ ಬದಲಾಗಿದೆ. ಹಿಂದೂ ಕಾರ್ಯಕರ್ತರ ಕೊಲೆ, ಪಹಲ್ಗಾಮ್, ಹಸು ಕೆಚ್ಚಲು ಕೊಯ್ದ ಪ್ರಕರಣ ಆದಾಗೆಲ್ಲ ಸಿದ್ದರಾಮಯ್ಯ ಸಬೂಬು ಕೊಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪಾಕ್ ಪರ ಘೋಷಣೆ ಕೂಡ ತೊಂದರೆಯಾಗಿ ಕಂಡುಬರುವುದಿಲ್ಲ,” ಎಂದು ಗಂಭೀರ ಟೀಕೆ ಮಾಡಿದ್ದಾರೆ.














