ಮನೆ ಸುದ್ದಿ ಜಾಲ ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಬೇಕರಿ : ₹25 ಲಕ್ಷಕ್ಕೂ ಹೆಚ್ಚು ಹಾನಿ!

ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಬೇಕರಿ : ₹25 ಲಕ್ಷಕ್ಕೂ ಹೆಚ್ಚು ಹಾನಿ!

0

ಗದಗ : ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ಮಧ್ಯರಾತ್ರಿ ಭೀಕರ ಅಗ್ನಿ ಅವಘಡವೊಂದು ಸಂಭವಿಸಿದ್ದು, ನ್ಯೂ ಮಹಾಂತೇಶ ಬೇಕರಿ ಎಂಬ ಖ್ಯಾತ ಅಂಗಡಿ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಈ ದುರಂತ ಸಂಭವಿಸಿರಬಹುದು ಎಂದು ಶಂಕಿಸಲಾಗುತ್ತಿದೆ. ಬೇಕರಿಯು ಮುಂಡರಗಿ ಹೊಸ ಬಸ್ ನಿಲ್ದಾಣದ ಎದುರಿನಲ್ಲಿದೆ.

ಮಧ್ಯರಾತ್ರಿಯ ವೇಳೆ ಈ ಅಗ್ನಿ ಅವಘಡ ಸಂಭವಿಸಿದ್ದು, ಅಂಗಡಿ ಮುಚ್ಚಲ್ಪಟ್ಟಿದ್ದ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿತು. ತಕ್ಷಣ ಸ್ಥಳೀಯರು ಬೆಂಕಿಯನ್ನು ಗಮನಿಸಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವಲ್ಲಿ ಹರಸಾಹಸ ಪಟ್ಟು ಯಶಸ್ವಿಯಾಗಿದ್ದಾರೆ. ಆದರೆ ಆಗಲೇ ಅಂಗಡಿಯಲ್ಲಿ ಲಕ್ಷಾಂತರ ಮೌಲ್ಯದ ತಿನಿಸು ಪದಾರ್ಥಗಳು, ಸಲಕರಣೆಗಳು ಹಾಗೂ ಇತರೆ ವಸ್ತುಗಳು ಸುಟ್ಟು ಭಸ್ಮವಾಗಿದ್ದವು.

ಶಾರ್ಟ್ ಸರ್ಕ್ಯೂಟ್ ಈ ಅಗ್ನಿ ಅವಘಡಕ್ಕೆ ಮುಖ್ಯ ಕಾರಣವೆಂದು ಶಂಕಿಸಲಾಗುತ್ತಿದೆ. ಘಟನೆಯ ತೀವ್ರತೆ ಎಷ್ಟಿತೆಂದರೆ, ಬೇಕರಿಯ ಒಳಾಂಗಣದ ಬಹುಪಾಲು ವಸ್ತುಗಳು ಸಂಪೂರ್ಣವಾಗಿ ನಾಶವಾಗಿವೆ. ಪ್ರಾಥಮಿಕ ಅಂದಾಜು ಪ್ರಕಾರ, ಈ ಬೆಂಕಿಯಿಂದ ₹25 ಲಕ್ಷಕ್ಕೂ ಅಧಿಕ ಆಸ್ತಿ ನಷ್ಟ ಸಂಭವಿಸಿದ್ದು, ಅಂಗಡಿ ಮಾಲಿಕರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.

ಅಗ್ನಿ ಅವಘಡದ ಮಾಹಿತಿಯನ್ನು ಪಡೆದ ತಕ್ಷಣ ಮುಂಡರಗಿ ತಹಶೀಲ್ದಾರರಾದ ಪಿ.ಎಸ್. ಯರ್ರಿಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.