ರಾಮನಗರ : ರಾಮನಗರ ತಾಲೂಕಿನ ವಡೇರಹಳ್ಳಿ ಗ್ರಾಮದಲ್ಲಿ ಶನಿವಾರ ಬೆಳಿಗ್ಗೆ ಶಾರ್ಟ್ ಸರ್ಕ್ಯೂಟ್ನಿಂದ ಸಂಭವಿಸಿದ ಭೀಕರ ಅಗ್ನಿ ಅವಘಡವೊಂದು ಮನೆಯೊಂದನ್ನು ಸಂಪೂರ್ಣವಾಗಿ ನಾಶಗೊಳಿಸಿದೆ. ಈ ಘಟನೆಯಲ್ಲಿ ಗೃಹೋಪಯೋಗಿ ವಸ್ತುಗಳು ಸುಟ್ಟು ಭಸ್ಮವಾಗಿದ್ದು, ಲಕ್ಷಾಂತರ ರೂಪಾಯಿಗಳ ಆಸ್ತಿ ಹಾನಿ ಸಂಭವಿಸಿದೆ. ಆದರೆ ಅದೃಷ್ಟವಶಾತ್ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ವಡೇರಹಳ್ಳಿ ಗ್ರಾಮದಲ್ಲಿ ಗುರು ಎಂಬುವವರಿಗೆ ಸೇರಿದ ನಿವಾಸದಲ್ಲಿ ಸಂಭವಿಸಿದೆ. ಎಸಿ ಯಂತ್ರದಿಂದ ಶಾರ್ಟ್ ಸರ್ಕ್ಯೂಟ್ ಸಂಭವಿಸಿದ್ದು, ಅದರಿಂದ ಬೆಂಕಿ ಕಾಣಿಸಿಕೊಂಡಿದೆ. ಮನೆಯಲ್ಲಿ ಎಲ್ಲರೂ ಮಲಗಿದ್ದ ವೇಳೆ ಘಟನೆ ನಡೆದಿದ್ದು, ಬೆಂಕಿ ಶಾಖ ತಟ್ಟುತ್ತಿದ್ದಂತೆಯೇ ಮನೆ ಮಂದಿ ಹೊರಗೆ ಓಡಿಬಂದು ಪ್ರಾಣ ಉಳಿಸಿಕೊಂಡಿದ್ದಾರೆ. ನೋಡನೋಡುತ್ತಿದ್ದಂತೆ ಇಡೀ ಮನೆಗೆ ಬೆಂಕಿ ಆವರಿಸಿ ಗೃಹೋಪಯೋಗಿ ವಸ್ತುಗಳು ಸಂಪೂರ್ಣ ಸುಟ್ಟುಕರಕಲಾಗಿವೆ.
ಘಟನೆ ಕಂಡ ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ರಾಮನಗರದಿಂದ ಬೆಂಕಿ ನಂದಿಸುವ ವಾಹನಗಳು ಕೆಲವೇ ನಿಮಿಷಗಳಲ್ಲಿ ಸ್ಥಳಕ್ಕೆ ತಲುಪಿದವು. ಅಗ್ನಿಶಾಮಕ ಸಿಬ್ಬಂದಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿ ಬೆಂಕಿಯನ್ನು ನಿಯಂತ್ರಣದಲ್ಲಿ ತರಲು ಶ್ರಮಪಟ್ಟರು. ಬೆಂಕಿಯು ಹೆಚ್ಚು ಮನೆಗಳಿಗೆ ಹರಡದಂತೆ ತಡೆಯುವಲ್ಲಿ ಅವರು ಯಶಸ್ವಿಯಾದರು.














