ಚೆನ್ನೈ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ದಾಳಿಯ ಮಹತ್ವದ ಬೆಳವಣಿಗೆ ಸಂಭವಿಸಿದ್ದು, ಆ ದಾಳಿಯಲ್ಲಿ ಭಾಗಿಯಾಗಿದ್ದೆಂದು ಶಂಕೆ ವ್ಯಕ್ತಪಡಿಸಲಾದ ಆರು ಉಗ್ರರು ಚೆನ್ನೈನ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ ಎಂಬ ಮಾಹಿತಿಯನ್ನು ನಿಖರ ಮೂಲಗಳು ಬಹಿರಂಗಪಡಿಸಿವೆ.
ಪಹಲ್ಗಾಮ್‌ನಲ್ಲಿ ನಡೆದ ಈ ಭಯಾನಕ ಘಟನೆಯಲ್ಲಿ 26 ಮಂದಿ ಅಮಾಯಕ ಪ್ರವಾಸಿಗರು ತಮ್ಮ ಪ್ರಾಣ ತ್ಯಾಗ ಮಾಡಬೇಕಾಯಿತು. ಭಾರತೀಯ ಗುಪ್ತಚರ ಇಲಾಖೆಯು ಈ ಘಟನೆ ಸಂಬಂಧಿಸಿದಂತೆ ಉಗ್ರರ ಚಲನೆಗಳನ್ನು ನಿಗಾದಲ್ಲಿ ಇಟ್ಟುಕೊಂಡು ಕಾರ್ಯಾಚರಣೆ ನಡೆಸುತ್ತಿದ್ದು, ಅವರು ದೇಶದಿಂದ ಹೊರಬರಲು ಯತ್ನಿಸುತ್ತಿದ್ದ ವೇಳೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಮಾಹಿತಿಯನ್ನು ಭಾರತ ಸರ್ಕಾರ ತಕ್ಷಣವೇ ಶ್ರೀಲಂಕಾ ಸರ್ಕಾರದೊಂದಿಗೆ ಹಂಚಿಕೊಂಡಿದ್ದು, ಶಂಕಿತರು ಕೊಲಂಬೋಗೆ ಪ್ರಯಾಣ ಮಾಡುವ ಸಂಭವವಿದೆ ಎಂದು ಸೂಚನೆ ನೀಡಲಾಗಿದೆ. ಪರಿಣಾಮವಾಗಿ ಕೊಲಂಬೋದಲ್ಲಿರುವ ಭಂಡಾರನಾಯಕ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತುರ್ತು ಆದೇಶದಡಿ ಲಾಕ್‌ಡೌನ್ ಮಾಡಲಾಗಿದ್ದು, ಎಲ್ಲಾ ಪ್ರಯಾಣಿಕರ ಮೇಲೆ ಕಟ್ಟುನಿಟ್ಟಿನ ತಪಾಸಣೆ ನಡೆಯುತ್ತಿದೆ.
ವಿಮಾನ ನಿಲ್ದಾಣದ ಒಳಗೆ ಹೆಚ್ಚಿನ ಭದ್ರತೆ ನೀಡಲಾಗಿದ್ದು, ಪ್ರತಿಯೊಬ್ಬ ಪ್ರಯಾಣಿಕನ ಚಲನೆ, ದಾಖಲೆ ಹಾಗೂ ಬ್ಯಾಗೇಜ್ ತಪಾಸಣೆಯು ತೀವ್ರಗೊಳಿಸಲಾಗಿದೆ. ಶಂಕಿತ ಉಗ್ರರು ಕೊಲಂಬೋ ವಿಮಾನ ನಿಲ್ದಾಣಕ್ಕೆ ತಲುಪಿದ್ದಾರೆ ಎಂಬ ಅನುಮಾನದ ಆಧಾರದಲ್ಲಿ ಸಿ.ಸಿ.ಟಿವಿ ದೃಶ್ಯಾವಳಿಗಳ ಪರಿಶೀಲನೆ ಮತ್ತು ವಿಮಾನ ಪಟ್ಟಿಗಳ ಪರಿಶೀಲನೆ ಜೋರಾಗಿದೆ.














