ಶಿವಮೊಗ್ಗ: ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಪೊಲೀಸರ ಭಯವೇ ಇಲ್ಲದೇ ಓಪನ್ ರೌಡಿಸಂ ನಡೆಯುತ್ತಿದೆ. ಹಾಡುಹಗಲೇ ನಡು ರಸ್ತೆಯಲ್ಲಿ ರೌಡಿಸಂ ಮಾಡುವುದು, ದೇವಸ್ಥಾನದಲ್ಲಿ ಮಚ್ಚಿಗೆ ಪೂಜೆ ಮಾಡುವುದು ಮತ್ತು ಬಡಾವಾಣೆಯೊಂದರಲ್ಲಿ ರೌಡಿಯೊಬ್ಬನಿಂದ ಗಾಳಿಯಲ್ಲಿ ಗುಂಡು ಹಾರಿಸಲಾಗಿದೆ. ಸದ್ಯ ಈ ಮೂರ್ಮೂರು ಘಟನೆಗಳಿಂದಾಗಿ ಅವಳಿ ನಗರದ ಜನರು ನಿಜಕ್ಕೂ ಬೆಚ್ಚಿಬೀದಿದ್ದಾರೆ.
ಶಿವಮೊಗ್ಗದ ಟಿಪ್ಪು ನಗರ ಬಡಾವಣೆಯಲ್ಲಿ ಮಹ್ಮದ್ ಇರ್ಫಾನ್ ಎಂಬ ರೌಡಿಶೀಟರ್ ಏರ್ ಗನ್ ಮೂಲಕ ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಬಹಿರಂಗವಾಗಿದೆ. ಘಟನೆ ರಾತ್ರಿಯ ವೇಳೆಯಲ್ಲಿ ಸಂಭವಿಸಿದ್ದು, ಆತ ಎತ್ತಿದ ಗನ್ ನಿಜವಾದದ್ದು ಎಂಬ ಅನುಮಾನವೂ ವ್ಯಕ್ತವಾಗಿದೆ. ಈ ಕುರಿತು ತುಂಗಾ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ. ಎಫ್‌ಐಆರ್ ಪ್ರಕಾರ ಗನ್ ಏರ್‌ಗನ್ ಎಂದು ಹೇಳಲಾಗಿದ್ದರೂ, ಇದರ ಮೂಲದ ಬಗ್ಗೆ ಅನುಮಾನಗಳು ಮೂಡಿವೆ.
ಇನ್ನೊಂದು ಘಟನೆ ಭದ್ರಾವತಿಯಲ್ಲಿನ ಮುಖ್ಯ ರಸ್ತೆಯಲ್ಲಿ ನಡೆದಿದೆ. ಪ್ರಮೋದ್ ಅಲಿಯಾಸ್ ಗಾಂಧಿ ಎಂಬ ರೌಡಿಶೀಟರ್ ತನ್ನ ಗ್ಯಾಂಗ್‌ನೊಂದಿಗೆ ಬಂದು ವಿಶ್ವ ಅಲಿಯಾಸ್ ಮುದ್ದೆ ಎಂಬ ಮತ್ತೊಬ್ಬ ರೌಡಿಯ ಮೇಲೆ ಮಚ್ಚು, ಲಾಂಗ್ ಗಳಿಂದ ದಾಳಿ ನಡೆಸಲು ಯತ್ನಿಸಿದ್ದ. ಈ ಘಟನೆ ಸಿಸಿಟಿವಿಯಲ್ಲಿ ದಾಖಲಾಗಿದ್ದು, ಜಸ್ಟ್ ಮಿಸ್ ಆಗಿ ವಿಶ್ವ ಬದುಕು ತಪ್ಪಿಸಿಕೊಂಡಿದ್ದಾನೆ. ಈ ದಾಳಿಯ ಹಿನ್ನೆಲೆ ಬೇರೆೇನೂ ಅಲ್ಲ – ಬಿಯರ್ ಬಾಟಲ್ ದಾಳಿಗೆ ಸೇಡು ತೀರಿಸಿಕೊಳ್ಳುವುದು ಮಾತ್ರ.
ಭದ್ರಾವತಿಯ ದೇವಾಲಯವೊಂದರಲ್ಲಿ ರೌಡಿಶೀಟರ್ ವಿಶ್ವ ಮಚ್ಚಿಗೆ ಪೂಜೆ ಸಲ್ಲಿಸಿದ್ದ. ಇದು ಭದ್ರಾವತಿ ನಗರದ ಹಳೆಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ದೇವಸ್ಥಾನದಲ್ಲಿ ಮಚ್ಚನ್ನು ಅರ್ಚಕರಿಂದ ಪೂಜೆ ಮಾಡಿಸಿಕೊಂಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದು ಕೇವಲ ಶಾಸ್ತ್ರೀಯ ಆಚರಣೆಯ ಅವಹೇಳನೆಯಲ್ಲ, ಸಾರ್ವಜನಿಕ ಸ್ಥಳಗಳಲ್ಲಿ ರೌಡಿಗಳ ಪ್ರಭಾವವನ್ನು ತೋರಿಸುವ ಆತಂಕಕಾರಿ ಬೆಳವಣಿಗೆಯಾಗಿದೆ.
ಹೀಗೆ ರೌಡಿಗಳ ಹಾವಳಿ ಅವಳಿ ನಗರದಲ್ಲಿ ದಿನದಿಂದ ದಿನಕ್ಕೆ ಜಾಸ್ತಿ ಆಗುತ್ತಿದೆ. ಖಾಕಿ ಭಯವಿಲ್ಲದೆ ರೌಡಿಗಳ ಹಾರಾಟ ಜೋರಾಗಿದೆ. ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ ಈ ಮೂರು ಘಟನೆಗಳು ರೌಡಿಗಳ ರೌಡಿಸಂ ಯಾವ ಮಟ್ಟಕ್ಕೆ ಇದೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತಿವೆ. ಈ ಓಪನ್ ರೌಡಿಸಂಗೆ ಶಿವಮೊಗ್ಗ ಪೊಲೀಸರು ಕಡಿವಾಣ ಹಾಕುತ್ತಾರಾ ಕಾದುನೋಡಬೇಕಿದೆ.














