ಬೆಂಗಳೂರು : ರಾಜ್ಯಾದ್ಯಂತ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಕಲ್ಪಿಸುವ ಕುರಿತು ಮಹತ್ವದ ಹೆಜ್ಜೆ ಇಡಲಾಗಿದೆ. ಮೇ 5ರಿಂದ ಮೇ 17ರವರೆಗೆ ಈ ಕುರಿತು ಸಮಗ್ರ ಸಮೀಕ್ಷೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, “2011ರ ಜನಗಣತಿಯ ಆಧಾರದ ಮೇಲೆ ಸದಾಶಿವ ಆಯೋಗ ನೀಡಿದ್ದ ಶಿಫಾರಸುಗಳನ್ನು ಗಮನದಲ್ಲಿಟ್ಟುಕೊಂಡು, ಪರಿಶಿಷ್ಟ ಜಾತಿಗಳೊಳಗಿನ ಸಮಾನ ಹಕ್ಕು ಹಂಚಿಕೆಗೆ ಈ ಸಮೀಕ್ಷೆ ಅಗತ್ಯವಾಗಿದೆ” ಎಂದು ಹೇಳಿದರು. ಇದನ್ನು ಆಧಾರವಾಗಿ ಸರ್ಕಾರ ನ್ಯಾ. ನಾಗಮೋಹನ್ ದಾಸ್ ನೇತೃತ್ವದ ಆಯೋಗವನ್ನು ರಚಿಸಿದೆ.
ಈ ಸಮೀಕ್ಷೆಯನ್ನು ನ್ಯಾ. ನಾಗಮೋಹನ್ ದಾಸ್ ಆಯೋಗದ ನಿರ್ದೇಶನದಲ್ಲಿ ರಾಜ್ಯದಾದ್ಯಂತ ಗಣತಿದಾರರು ಮನೆ ಮನೆಗೆ ಹೋಗಿ ನಡೆಸಲಿದ್ದಾರೆ. ಇದು ಕೇವಲ ಪರಿಶಿಷ್ಟ ಜಾತಿಗೆ ಸೇರಿದ ಮನೆಗಳಿಗೆ ಮಾತ್ರವಲ್ಲ, ಇತರೆ ಸಮುದಾಯದ ಮನೆಗಳಿಗೆ ಸಹ ಆಗಲಿದೆ. ಇದರ ಉದ್ದೇಶ ಪರಿಶಿಷ್ಟ ಜಾತಿಯ ಮನೆಗಳಿಂದ ಮನೆ ಸಂಖ್ಯೆ, ಸದಸ್ಯರ ಸಂಖ್ಯೆ ಮತ್ತು ಇತರ ಮಾದರಿ ಮಾಹಿತಿಗಳನ್ನು ಸಂಗ್ರಹಿಸುವುದು. ಮತ್ತು ಪರಿಶಿಷ್ಟ ಜಾತಿಯಲ್ಲದ ಮನೆಗಳಿಂದ ಮನೆ ಸಂಖ್ಯೆ ಮತ್ತು ಕುಟುಂಬ ಸದಸ್ಯರ ಸಂಖ್ಯೆ ಆ್ಯಪ್ ನಲ್ಲಿ ನಮೂದಿಸಿ ದಾಖಲಿಸಲಿದ್ದಾರೆ ಎಂದು ಹೇಳಿದ್ದಾರೆ.
ಸಮೀಕ್ಷೆ ನಡೆಸುವಾಗ ಗಣತಿದಾರರು ತಮ್ಮ ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್‌ಗಳಲ್ಲಿ ಮನೆ ಸಂಖ್ಯೆ ಆ್ಯಪ್ ಬಳಸಿ, ಡೇಟಾ ದಾಖಲಿಸಲಿದ್ದಾರೆ. ಇದರಿಂದ ಸಮೀಕ್ಷೆಯ ನಿಖರತೆ ಮತ್ತು ಗತಿಯು ಸುಧಾರಣೆಯಾಗಲಿದೆ.














