ಉಡುಪಿ: ಬಿಜೆಪಿ ಹಿರಿಯ ನಾಯಕ ಮತ್ತು ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಕಾಂಗ್ರೆಸ್ ಸರ್ಕಾರದಲ್ಲಿರುವ ಎಲ್ಲಾ ಮಂತ್ರಿಗಳು ರೌಡಿಗಳು. ಅವರಲ್ಲಿ ಹೆಚ್ಚಿನವರು ಜೈಲಿಗೆ ಹೋಗಿ ಬಂದವರು. ಸಿದ್ದರಾಮಯ್ಯ ಮತ್ತು ಡಿಕೆಶಿ ಸೇರಿದಂತೆ ಬಹುಮತದ ಮಂತ್ರಿಗಳ ಮೇಲೆ ಕೇಸುಗಳಿವೆ” ಎಂದು ಗಂಭೀರ ಆರೋಪ ಮಾಡಿದ್ದಾರೆ.
ಕಟೀಲ್ ಅವರು ಹಿಂದೂ ಸಂಘಟನೆಯ ಕಾರ್ಯಕರ್ತ ಸುಹಾಸ್ ಶೆಟ್ಟಿ ಕುರಿತು ಮಾತನಾಡುತ್ತಾ, “ಆತನ ಮೇಲೆ ಯಾವುದೇ ಪ್ರಕರಣಗಳಿಲ್ಲ. ಆದರೆ ಹಿಂದು ಸಂಘಟನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರಣಕ್ಕೆ ಆತನನ್ನು ಗುರಿಯಾಗಿಸಲಾಗಿದೆ. ನ್ಯಾಯಾಲಯವೇ ರೌಡಿಶೀಟರ್ ಎಂದು ಘೋಷಿಸಬೇಕು, ಗೃಹ ಸಚಿವ ಅಲ್ಲ” ಎಂದು ಟೀಕಿಸಿದರು.
ಅವರು ಆರೋಪಿಸಿದಂತೆ, ಕೆಲವು ಸಂಘಟಿತ ಗುಂಪುಗಳು ‘ಟಾರ್ಗೆಟ್ ಗ್ರೂಪ್’ ರಚಿಸಿದ್ದು, ಹಿಂದೂ ಕಾರ್ಯಕರ್ತರ ವಿರುದ್ಧ ಕ್ರಿಯಾಶೀಲವಾಗಿದೆ. “ಈ ಟಾರ್ಗೆಟ್ ಗ್ರೂಪ್ ಕಾರ್ಯಾಚರಣೆ ಆರಂಭಿಸಿದೆ. ಸುಹಾಸ್ ಮೇಲೆ ತಪ್ಪು ಆರೋಪ ಹಾಕುವುದು ನಿಲ್ಲಿಸಿ, ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದರು.
ಕರಾವಳಿಯಲ್ಲಿ ರಚನೆಯಾದ ಕೋಮು ನಿಗ್ರಹದಳದ ಕುರಿತು ಪ್ರತಿಕ್ರಿಯಿಸಿದ ಕಟೀಲ್, “ಈ ದಳ ಹಿಂದೂ ವಿರೋಧಿ ನಿಲುವಿನಲ್ಲಿ ರಚನೆಯಾಗಿದೆ. ಇಂತಹ ದಳ ಹಿಂದೂ ಕಾರ್ಯಕರ್ತರನ್ನು ಬಂಧಿಸಲು ಉಪಯೋಗವಾಗುತ್ತಿದೆ. ಎಲ್ಲ ಸಮುದಾಯಗಳಿಗೆ ನ್ಯಾಯ ಒದಗಿಸುವಂತಹ ಸಮಾನಪಾಲಿತ ದಳ ರಚಿಸಬೇಕಿದೆ” ಎಂದು ಹೇಳಿದರು.
ಹಿಂದೂ ಸಂಘಟನೆಯ ನಾಯಕ ಶರಣ್ ಪಂಪ್‌ವೆಲ್ ಮತ್ತು ಭರತ್ ಕುಮ್ಡೇಲ್ ಅವರಿಗೆ ಆಗುತ್ತಿರುವ ಜೀವ ಬೆದರಿಕೆಯ ಕುರಿತು ಅವರು ಮಾತನಾಡಿದರು. “ಈ ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಇದೆಯಾ? ಅವರು ಮಾಡಿದ ದೂರುಗಳ ಬಗ್ಗೆ ಯಾವುದೇ ತನಿಖೆಯೂ ಇಲ್ಲ. ಅವರಿಗೆ ರಕ್ಷಣೆಗೆ ಪೊಲೀಸರು ನಿಯೋಜಿಸಬೇಕು ಮತ್ತು ಬೆದರಿಕೆ ಹಾಕಿದವರನ್ನು ಬಂಧಿಸಬೇಕು” ಎಂದು ಒತ್ತಾಯಿಸಿದರು.
ಮಂಗಳೂರು ನಗರದಲ್ಲಿ ನಡೆಯುತ್ತಿರುವ ಘಟನೆಗಳನ್ನು ಕಾಶ್ಮೀರದ ಭಯೋತ್ಪಾದನಾ ಚಟುವಟಿಕೆಗೆ ಹೋಲಿಸಿದ ಕಟೀಲ್, “ಇಲ್ಲಿ ಹಿಂದೂಗಳ ವಿರುದ್ಧ ನಡೆಯುತ್ತಿರುವ ದಾಳಿಗಳು ಮತ್ತು ಪಾಕಿಸ್ತಾನದ ಧ್ವಜ ಹಾರಿಸುವವರ ವಿರುದ್ಧ ಕೇಸುಗಳಿಲ್ಲದಿರುವುದು ವಿಚಿತ್ರ. ಸರ್ಕಾರ ಕಾನೂನು ಮತ್ತು ಶಿಸ್ತಿನಲ್ಲಿ ಸಂಪೂರ್ಣ ವಿಫಲವಾಗಿದೆ” ಎಂದು ಕಿಡಿಕಾರಿದರು.
“ಕಾಂಗ್ರೆಸ್ ಸರ್ಕಾರ ಹಿಂದೂ ಸಮಾಜದ ವಿರುದ್ಧ ಕಾರ್ಯನಿರ್ವಹಿಸುತ್ತಿದೆ. ಸುಹಾಸ್ ಮನೆಗೆ ಕಾಂಗ್ರೆಸ್ ಮುಖಂಡರು ಹೋಗಲು ತಡೆ ಹಾಕಿದ್ದಾರೆ. ಮುಸ್ಲಿಂ ಮುಖಂಡರು ರಾಜೀನಾಮೆಗೆ ಎಚ್ಚರಿಕೆ ನೀಡಿದ್ದಾರೆ. ಇದು ರಾಜಕೀಯ ತುಪ್ಪ ಸುರಿಯುವ ಕೆಲಸ” ಎಂದು ಆರೋಪಿಸಿದರು.
ಕಾನೂನು, ಜನರ ರಕ್ಷಣೆ ಎರಡರಲ್ಲೂ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಗೃಹ ಸಚಿವರ ಸಭೆಯಲ್ಲಿ ಶಾಸಕರಿಗೆ ಅವಕಾಶ ಇಲ್ಲ. ಆದರೆ ಮುಸ್ಲಿಂ ಪ್ರಮುಖರು ಬಂದು ಗಲಾಟೆಯನ್ನು ನಡೆಸಿದ್ದಾರೆ. ಇದಕ್ಕೆ ಯಾವ ಕ್ರಮ ಕೈಗೊಂಡಿದ್ದೀರಾ? ಗೃಹ ಸಚಿವರಿಗೆ ಭಯ ಹುಟ್ಟಿಸುವ ರೀತಿಯಲ್ಲಿ ಆಕ್ರಮಣ ನಡೆದಿದೆ. ರಾಜ್ಯದಲ್ಲಿ ಸರ್ಕಾರ ಇದೇಯೋ ಅಥವಾ ಸತ್ತು ಹೋಗಿದೆಯೋ ಎಂದು ಪ್ರಶ್ನಿಸಿದರು.
ಪಹಲ್ಗಾಮ್ ಭಯೋತ್ಪಾದನಾ ದಾಳಿಯ ಕುರಿತು ಮಾತನಾಡಿದ ಅವರು, “ಪಾಕಿಸ್ತಾನ ಈಗ ಭಯಭೀತವಾಗಿದೆ. ಕೇಂದ್ರ ಸರ್ಕಾರದ ಕ್ರಮಗಳಿಂದ ಉಗ್ರ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ತರಲಾಗಿದೆ. 2014 ನಂತರ ದೇಶದ ಭದ್ರತೆ ಸುಧಾರಣೆ ಕಂಡಿದೆ” ಎಂದು ಹೇಳಿದರು.














