ಮನೆ ರಾಜ್ಯ ವಾಯುಮಾಲಿನ್ಯ: ಭಾರತೀಯರ ಆಯಸ್ಸಿನಲ್ಲಿ 5 ವರ್ಷ ಕಡಿತಗೊಳ್ಳುವ ಅಪಾಯ

ವಾಯುಮಾಲಿನ್ಯ: ಭಾರತೀಯರ ಆಯಸ್ಸಿನಲ್ಲಿ 5 ವರ್ಷ ಕಡಿತಗೊಳ್ಳುವ ಅಪಾಯ

0

ನವದೆಹಲಿ(New Delhi): ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಮಾರ್ಗಸೂಚಿಗಳನ್ನು ಅನುಸರಿಸದೇ ಇದ್ದಲ್ಲಿ ಭಾರತೀಯರ ಆಯಸ್ಸಿನಲ್ಲಿ ಸರಾಸರಿ ಐದು ವರ್ಷ ಕಡಿಮೆಯಾಗಲಿದೆ  ಎಂಬ ಆಘಾತಕಾರಿ ಅಧ್ಯಯನ ವರದಿಯೊಂದು ಲಭ್ಯವಾಗಿದೆ.

ವಿಶ್ವದಲ್ಲಿ ಅತಿ ಹೆಚ್ಚು ಮಾಲಿನ್ಯವಿರುವ ನಗರದಲ್ಲಿ ಒಂದಾಗಿರುವ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಇದೇ ರೀತಿ ಮುಂದುವರಿದರೆ, ನಗರದ ನಿವಾಸಿಗಳ ಆಯಸ್ಸಿನಲ್ಲಿ 10 ವರ್ಷ ಕಡಿಮೆಯಾಗುವ ಅಪಾಯ ಇದೆ ಎಂದು ಇದೇ ಅಧ್ಯಯನ ಹೇಳಿದೆ.

ಅಮೆರಿಕದ ಷಿಕಾಗೊ ವಿಶ್ವವಿದ್ಯಾಲಯದ ‘ಎನರ್ಜಿ ಪಾಲಿಸಿ ಇನ್ಸ್‌ಟಿಟ್ಯೂಟ್‘ ಮಂಗಳವಾರ ಬಿಡುಗಡೆ ಮಾಡಿರುವ ‘ವಾಯು ಗುಣಮಟ್ಟ ಜೀವನಶೈಲಿ ಸೂಚ್ಯಂಕ’ದಲ್ಲಿ (ಎಕ್ಯೂಎಲ್‌ಐ) ಈ ಕುರಿತು ವಿವರಿಸಲಾಗಿದೆ.

ದೆಹಲಿಯ ಗಾಳಿಯಲ್ಲಿ, ಮಾಲಿನ್ಯಕಾರಕ ‘ಪಿಎಂ 2.5’ನ ಮಟ್ಟ ಪ್ರತಿ ಘನ ಮೀಟರ್‌ಗೆ 107 ಮೈಕ್ರೊಗ್ರಾಮ್‌ಗಳಿಗಿಂತಲೂ ಅಧಿಕ ಇದೆ. ಇದರ ಪ್ರಮಾಣ ಡಬ್ಲ್ಯುಎಚ್‌ಒ ಮಾರ್ಗಸೂಚಿ ನಿಗದಿಪಡಿಸಿರುವ ಮಟ್ಟಕ್ಕಿಂತಲೂ 21 ಪಟ್ಟು ಹೆಚ್ಚಾಗಿದ್ದು, ಇದು ದೆಹಲಿ ನಿವಾಸಿಗಳ ಆಯಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಉತ್ತರಭಾರತದಲ್ಲಿ ಅಂದಾಜು 51 ಕೋಟಿ ಜನರು ವಾಸಿಸುತ್ತಿದ್ದು, ಈ ಪ್ರದೇಶ ಅತಿಹೆಚ್ಚು ಮಾಲಿನ್ಯಗೊಂಡಿದೆ. ಈ ‍ಪ್ರದೇಶದ ಜನರು ತಮ್ಮ ಆಯಸ್ಸಲ್ಲಿ 7.6 ವರ್ಷಗಳಷ್ಟು ಕಡಿಮೆಯಾಗುವ ಅಪಾಯವನ್ನು ಎದುರಿಸುತ್ತಿದ್ದಾರೆ.

ಒಂದು ವೇಳೆ, ಡಬ್ಲ್ಯುಎಚ್‌ಒ ಮಾನದಂಡಗಳಂತೆ ಮಾಲಿನ್ಯಕಾರಕಗಳ ಪ್ರಮಾಣವನ್ನು (ಪಿಎಂ2.5) ನಿರ್ವಹಣೆ ಮಾಡಿದಲ್ಲಿ, ಉತ್ತರಪ್ರದೇಶದ ನಿವಾಸಿಗಳ ಆಯಸ್ಸು 8.2 ವರ್ಷ ಹೆಚ್ಚಳವಾಗಬಹುದು. ಬಿಹಾರದಲ್ಲಿ 7.9 ವರ್ಷ, ಪಶ್ಚಿಮ ಬಂಗಾಳ–5.9 ವರ್ಷಗಳು ಹಾಗೂ ರಾಜಸ್ಥಾನ ನಿವಾಸಿಗಳ ಆಯಸ್ಸು 4.8 ವರ್ಷಗಳಷ್ಟು ಹೆಚ್ಚಳವಾಗಬಹುದು ಎಂದೂ ವರದಿಯಲ್ಲಿ ಹೇಳಲಾಗಿದೆ.