ಮನೆ Uncategorized ಮಗಳ ಸಾವಿಗೆ ಪ್ರತೀಕಾರ : ಆರೋಪಿಯ ಅಪ್ಪನನ್ನು ಬರ್ಬರವಾಗಿ ಕೊಂದ ತಂದೆ

ಮಗಳ ಸಾವಿಗೆ ಪ್ರತೀಕಾರ : ಆರೋಪಿಯ ಅಪ್ಪನನ್ನು ಬರ್ಬರವಾಗಿ ಕೊಂದ ತಂದೆ

0

ಮಂಡ್ಯ : ಮಗಳ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು, ಆರೋಪಿ ಯುವಕನ ತಂದೆಯನ್ನು ತಾನೇ ಬರ್ಬರವಾಗಿ ಕೊಲೆ ಮಾಡಿದ ತಂದೆಯ ಕೃತ್ಯ ಮಂಡ್ಯ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ. ಈ ಭೀಕರ ಘಟನೆ ಪಾಂಡವಪುರ ತಾಲೂಕಿನ ಮಾಣಿಕ್ಯನಹಳ್ಳಿಯಲ್ಲಿ ನಡೆದಿದೆ.

ಮೃತ ದೀಪಿಕಾ ಎಂಬವರ ತಂದೆ ವೆಂಕಟೇಶ್, 2024ರ ಜನವರಿ 22ರಂದು ದೀಪಿಕಾಳನ್ನು ಕೊಲೆ ಮಾಡಿದ ಆರೋಪಿ ನಿತೀಶ್‌ನ ತಂದೆ ನರಸಿಂಹೇಗೌಡರನ್ನು ಚಾಕು ಇರಿದು ಹತ್ಯೆ ಮಾಡಿದ್ದಾರೆ. ನಿತೀಶ್ ಹಾಗೂ ದೀಪಿಕಾ ಸ್ನೇಹಿತರಾಗಿದ್ದು, ದೀಪಿಕಾ ಶಿಕ್ಷಕಿ ಆಗಿದ್ದರು. ಇಬ್ಬರ ನಡುವೆ ನಿಕಟತೆಯಿರುವುದನ್ನು ಗಮನಿಸಿದ ದೀಪಿಕಾ ಗಂಡ ಹಾಗೂ ಕುಟುಂಬಸ್ಥರು ಆತಂಕ ವ್ಯಕ್ತಪಡಿಸಿ, ನಿತೀಶ್‌ಗೆ ಎಚ್ಚರಿಕೆ ನೀಡಿದ್ದರು.

ಇದರಿಂದಾಗಿ ದೀಪಿಕಾ ಮತ್ತು ನಿತೀಶ್‌ ನಡುವೆ ಅಂತರ ಶುರುವಾಯಿತು. ಆದರೆ ಈ ಅಂತರದಿಂದ ನಿತೀಶ್ ಅಸಹನೀಯನಾಗಿ, ತನ್ನ ಹುಟ್ಟುಹಬ್ಬದ ನೆಪದಲ್ಲಿ ದೀಪಿಕಾಳನ್ನು ಬೆಟ್ಟದ ತಪ್ಪಲಿಗೆ ಕರೆದು ಜಗಳವಾಡಿ ಕೊಲೆ ಮಾಡಿದ್ದಾನೆ. ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸ್ ತನಿಖೆಯಲ್ಲಿ ನಿತೀಶ್ ಬಂಧಿತನಾಗಿದ್ದ.

ಆದರೆ ನಂತರ ನಿತೀಶ್ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಗೊಂಡಿದ್ದನು. ಮಗಳ ಸಾವಿನಿಂದ ನೊಂದಿದ್ದ ವೆಂಕಟೇಶ್ ಈ ವೇಳೆ ಪ್ರತೀಕಾರ ತೀರಿಸಿಕೊಳ್ಳಬೇಕೆಂದು ನಿರ್ಧರಿಸಿದ್ದ. ಈ ಹಿನ್ನೆಲೆಯಲ್ಲಿ ನಿತೀಶ್ ತಂಗಿಯ ಮದುವೆ ನಿಶ್ಚಯವಾಗಿರುವ ದಿನವಾದ ಭಾನುವಾರ (ಮೇ 5) ಧರ್ಮಸ್ಥಳದಿಂದ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ, ನಿತೀಶ್ ತಂದೆ ನರಸಿಂಹೇಗೌಡರ ಮೇಲೆ ಆತ ದಾಳಿ ನಡೆಸಿದ್ದಾನೆ.

“ನೀವು ನನ್ನ ಮಗಳನ್ನು ಕೊಂದು ನಿಮ್ಮ ಮಗಳ ಮದುವೆ ಮಾಡ್ತಾ ಇದ್ದೀರಾ?” ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಾ, ಚಾಕುವಿನಿಂದ ಇರಿದು ನರಸಿಂಹೇಗೌಡರನ್ನು ಬರ್ಬರವಾಗಿ ಹತ್ಯೆ ಮಾಡಿದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕೊಲೆ ಬಳಿಕ ವೆಂಕಟೇಶ್ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನೆಯ ಮಾಹಿತಿ ಪಡೆದ ಮೇಲುಕೋಟೆ ಪೊಲೀಸರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣವನ್ನು ದಾಖಲಿಸಿದ್ದಾರೆ. ಅಪರಾಧಿ ವೆಂಕಟೇಶ್‌ಗಾಗಿ ಪೊಲೀಸರು ವ್ಯಾಪಕ ಶೋಧ ಕಾರ್ಯ ಆರಂಭಿಸಿದ್ದಾರೆ.