ಮಡಿಕೇರಿ: ಆಸ್ತಿ ವಿಚಾರವಾಗಿ ಸಹೋದರರ ನಡುವೆ ಕಲಹ ಏರ್ಪಟ್ಟು ಅಣ್ಣನೇ ತಮ್ಮನಿಗೆ ಗುಂಡಿನ ಹಾರಿಸಿ ಕೊಲೆ ಮಾಡಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಅಭ್ಯತ್ ಮಂಗಲ ಗ್ರಾಮದಲ್ಲಿ ನಡೆದಿದೆ.
ಮೃತ ವ್ಯಕ್ತಿಯು ಕೊಳಂಬೆ ವಿನು ಬೆಳ್ಯಪ್ಪ (53) ಎಂಬವರಾಗಿದ್ದಾರೆ. ಅವರು ನಂಜರಾಯಪಟ್ಟಣದ ನಿವಾಸಿಯಾಗಿದ್ದು, ತಮಗೆ ಸೇರಿದ ಅಭ್ಯತ್ ಮಂಗಲದಲ್ಲಿರುವ ತೋಟದ ಗೋದಾಮಿನಲ್ಲಿ ಪೈಪುಗಳ ಪರಿಶೀಲನೆಗಾಗಿ ತೆರಳಿದ್ದರು. ಈ ವೇಳೆ, ಸಹೋದರ ಮಣಿ ಬೆನ್ನು ಹಿಂದೆ ಬಂದು ಆತನ ಮೇಲೆ ಗುಂಡು ಹಾರಿಸಿದ್ದಾನೆ. ಸ್ಥಳದಲ್ಲೇ ವಿನು ಸಾವಿಗೀಡಾದರು ಎಂದು ವರದಿಯಾಗಿದೆ.
ಸ್ಥಳೀಯ ಮೂಲಗಳ ಪ್ರಕಾರ, ಅಣ್ಣ-ತಮ್ಮನ ನಡುವೆ ಹಲವಾರು ದಿನಗಳಿಂದ ಆಸ್ತಿ ಹಕ್ಕು ಸಂಬಂಧಿತ ಜಗಳ ನಡೆಯುತ್ತಿತ್ತು. ಕುಟುಂಬದ ಆಂತರಿಕ ಕಲಹ ಕೊನೆಗೆ ಇಂಥ ದಾರಣ ರೂಪದಲ್ಲಿ ಕೊನೆಯಾಯಿತು ಎನ್ನಲಾಗಿದೆ. ಕೊಲೆಯ ಬಳಿಕ ಆರೋಪಿ ಮಣಿ ಪರಾರಿಯಾಗಲು ಯತ್ನಿಸಿದ್ದರೂ, ಪೊಲೀಸರು ಅವನನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಮಡಿಕೇರಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕ ರಾಮರಾಜನ್ ಕೂಡ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ತನಿಖೆ ಮುಂದುವರಿದಿದೆ.














