ಮನೆ ಸುದ್ದಿ ಜಾಲ ಉನ್ನತ ಅಂಕಗಳನ್ನು ಪಡೆವ ಮೂರು ವಿದ್ಯಾರ್ಥಿನಿಯರಿಗೆ ತಲಾ ೧ ಲಕ್ಷ ಪ್ರೋತ್ಸಾಹಧನ: ಪಿ. ರವಿ ಕುಮಾರ್

ಉನ್ನತ ಅಂಕಗಳನ್ನು ಪಡೆವ ಮೂರು ವಿದ್ಯಾರ್ಥಿನಿಯರಿಗೆ ತಲಾ ೧ ಲಕ್ಷ ಪ್ರೋತ್ಸಾಹಧನ: ಪಿ. ರವಿ ಕುಮಾರ್

0

ಮಂಡ್ಯ: ಕಳೆದ ಬಾರಿ ಮಂಡ್ಯ ಜಿಲ್ಲೆ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ೧೮ನೇ ಸ್ಥಾನದಲ್ಲಿತ್ತು, ಈ ಬಾರಿಯ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ಜಿಲ್ಲೆಗೆ ೧೨ನೇ ಸ್ಥಾನ ದೊರಕಿರುವುದು ಸಂತಸದ ಸಂಗತಿ. ಅದೇ ರೀತಿ ಸರ್ಕಾರಿ ಮಹಿಳಾ ಕಾಲೇಜು (ಸ್ವಯತ್ತ) ಕಲಾ, ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಉತ್ತಮ ಅಂಕಗಳನ್ನು ಪಡೆಯುವ ಮೂರು ವಿದ್ಯಾರ್ಥಿನಿಯರಿಗೆ ನನ್ನ ಸಂಬಳದಿಂದ ತಲಾ ೧ ಲಕ್ಷದಂತೆ ೩ ಲಕ್ಷ ಪ್ರೋತ್ಸಾಹಧನ ನೀಡುತ್ತೇನೆ ಹಾಗೂ ಹಾಸ್ಟೆಲ್ ನಿರ್ವಹಣೆಗೆ ೧ ಲಕ್ಷ ನೀಡುತ್ತೇನೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರವಿಕುಮಾರ್ ಅವರು ಹೇಳಿದರು.

ಇಂದು ಮಹಿಳಾ ಸರ್ಕಾರಿ (ಸ್ವಾಯತ್ತ) ಕಾಲೇಜಿನ ೨೦೨೪-೨೦೨೫ ನೇ ಸಾಲಿನ ಕಾಲೇಜು ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ಪದವಿಯ ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದ ಅಂತಿಮ ಘಟ್ಟದಲ್ಲಿ ಇದ್ದೀರಿ, ಉತ್ತಮ ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿಗೆ ಒಳ್ಳೆಯ ಹೆಸರು ತನ್ನಿ, ವಿದ್ಯಾರ್ಥಿನಿಯರು ರಾಜಕೀಯದ ಕುರಿತು ಅಸಡ್ಡೆ ತೋರಿಸದೆ, ರಾಜಕೀಯ ಪ್ರವೇಶಿಸಬೇಕು, ಆಡಳಿತದ ಚುಕ್ಕಾಣಿ ಹಿಡಿಯಬೇಕು. ಉತ್ತಮ ವಿದ್ಯಾಭ್ಯಾಸ ಪಡೆದು ಉನ್ನತ ಹುದ್ದೆಯನ್ನು ಅಲಂಕರಿಸಬೇಕು ಎಂದು ಹೇಳಿದರು.

ಜಿಲ್ಲೆಯ ವಿದ್ಯಾರ್ಥಿಗಳು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದು ಸದುದ್ದೇಶದಿಂದ ಉಚಿತವಾಗಿ ಐಎಎಸ್/ ಐಪಿಎಸ್ ತರಬೇತಿಯನ್ನು ಜಿಲ್ಲೆಯಲ್ಲಿ ಪ್ರಾರಂಭಿಸಲಾಗುವುದು. ಜಿಲ್ಲಾಧಿಕಾರಿಗಳ ಬಳಿ ವಿಶೇಷ ಉಪನ್ಯಾಸ ನೀಡುವಂತೆ ಚರ್ಚಿಸಿದ್ದೇನೆ, ನೀವೆಲ್ಲರೂ ಸಹ ಸಮಾಜದಲ್ಲಿ ಉತ್ತಮ ಸ್ಥಾನವನ್ನು ಅಲಂಕರಿಸಬೇಕು ಎಂದು ಶುಭ ಹಾರೈಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಮಾತನಾಡಿ ಆಸಕ್ತಿ ಮತ್ತು ನಿರಂತರ ಪರಿಶ್ರಮದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ, ಯಾವುದೇ ವೃತ್ತಿಯನ್ನು ತೆಗೆದುಕೊಂಡರು ಮೊದಲು ಶ್ರದ್ಧೆ ಮತ್ತು ನಿರಂತರ ಪರಿಶ್ರಮ ಬೇಕಾಗುತ್ತದೆ, ಹಾಗಾಗಿ ನೀವೆಲ್ಲರೂ ನಿಮ್ಮ ಜೀವನದಲ್ಲಿ ನಿರಂತರ ಪರಿಶ್ರಮವನ್ನು ಬೆಳೆಸಿಕೊಳ್ಳಿ ಎಂದು ಕಿವಿ ಮಾತು ಹೇಳಿದರು.

ರಂಗಕರ್ಮಿ ಹಾಗೂ ಚಲನಚಿತ್ರ ನಟರಾದ ಮಂಡ್ಯ ರಮೇಶ್ ಅವರು ಮಾತನಾಡಿ ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಪೂಜನೀಯ ಸ್ಥಾನವಿದೆ, ೯ ತಿಂಗಳ ಕಾಲ ಬಾಹ್ಯಾಕಾಶದೊಂದಿಗೆ ಹೋರಾಡಿದ ಸುನೀತಾ ವಿಲಿಯಮ್ಸ್ ಭಾರತದ ಗೌರವವನ್ನು ಕಾಪಾಡಿದರು, ಏಷ್ಯಾದಲ್ಲಿ ಮೊದಲ ಬಾರಿಗೆ ಒಲಿಂಪಿಕ್ಸ್ ಕಪ್ ಗೆದ್ದುಕೊಂಡು ಬಂದದ್ದು ಹೆಣ್ಣು ಮಕ್ಕಳು, ಈಗೆ ಅನೇಕ ಕ್ಷೇತ್ರಗಳಲ್ಲಿ ಹೆಣ್ಣು ಮಕ್ಕಳ ಸಾಧನೆ ಶ್ಲಾಘನೀಯ ಇಂತಹಾ ನಾಡಿನಲ್ಲಿ ಹೆಣ್ಣು ಭ್ರೂಣ ಹತ್ಯೆಗಳು ನಡೆಯುತ್ತಿರುವುದು ನಿಜಕ್ಕೂ ವಿಷಾದನೀಯ ಎಂದರು.

ರಂಗಭೂಮಿ ಕೇವಲ ಮನೋರಂಜನೆಗಲ್ಲ ಅದು ಹೋರಾಟದ ಅಸ್ತ್ರ, ಹೆಣ್ಣು ಮಕ್ಕಳು ಸಮಾಜದಲ್ಲಿ ಅನುಭವಿಸುತ್ತಿರುವ ಅಸಮಾನತೆ, ಸೈಷ್ಣತೆ, ಹೆಣ್ಣಿನ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳನ್ನು ನಾಟಕದ ರೂಪದಲ್ಲಿ ಕಟ್ಟಿ ನಾಟಕ ತರಬೇತಿ ಶಿಬಿರಗಳನ್ನು ಮಾಡಿ ಶಾಲಾ ಕಾಲೇಜುಗಳಲ್ಲಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಾದರ್ಶನ ನೀಡುವ ಮೂಲಕ ಸಮಾಜದ ಕಣ್ಣು ತೆರೆಸುವ ಸಾಧನ ಎಂದರು.

ಚಲನಚಿತ್ರ ನಟಿ ಹಾಗೂ ನಿರ್ಮಾಪಕೀಯದ ಶರ್ಮಿಳಾ ಮಾಂಡ್ರೆ ಅವರು ಮಾತನಾಡಿ ನಾನು ಸಿನಿಮಾ ರಂಗಕ್ಕೆ ೧೬ ನೇ ವಯಸ್ಸಿನಲ್ಲೇ ಕಾಲಿಟ್ಟೆ ಚಿತ್ರರಂಗ ನನ್ನ ಆಸಕ್ತಿದಾಯಕ ಕ್ಷೇತ್ರವಾಗಿತ್ತು, ನೀವು ಕಾಲೇಜಿನ ದಿನಗಳನ್ನು ಖುಷಿಯಿಂದ ಕಳೆಯುವುದರ ಜೊತೆಗೆ ಮುಂದೆ ಯಾವ ಕ್ಷೇತ್ರಕ್ಕೆ ಹೋಗಬೇಕು ಎಂಬುದನ್ನು ಈಗಲೇ ನಿರ್ಧರಿಸಿ. ನಿಮ್ಮ ಆಸಕ್ತಿಯ ಕ್ಷೇತ್ರಗಳಲ್ಲಿ ಹೊಸ ಚಾಪು ಮೂಡಿಸಿ ಎಂದು ಎಲ್ಲರಿಗೂ ಶುಭ ಹಾರೈಸಿದರು.

ಮಂಡ್ಯ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಶಿವಚಿತ್ತಪ್ಪ ಅವರು ಮಾತನಾಡಿ ಮೇ ಎರಡನೇ ವಾರದಲ್ಲಿ ಮಂಡ್ಯ ವಿಶ್ವವಿದ್ಯಾನಿಲಯದ ಮೂರನೇ ವರ್ಷದ ಘಟಿಕೋತ್ಸವ ಕಾರ್ಯಕ್ರಮವನ್ನು ಹೆಚ್ಚಿನ ವಿದ್ಯಾರ್ಥಿಗಳನ್ನು ಸೇರಿಸಿ ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ, ವೃತ್ತಿಪರ ಕೋರ್ಸ್ ಗಳಾದ ಎಂ ಬಿ ಎ ಮತ್ತು ಎಂ ಸಿ ಎ ಸ್ನಾತಕೋತರ ಪದವಿಗಳನ್ನು ಪ್ರಾರಂಭಿಸಲು ಅನುಮತಿ ದೊರೆತಿದೆ. ಈಗಾಗಲೇ ಮಂಡ್ಯ ವಿಶ್ವವಿದ್ಯನಿಲಯದಲ್ಲಿ ೧೩ ಸಂಶೋಧಕ ವಿದ್ಯಾರ್ಥಿಗಳಿದ್ದಾರೆ, ಅದರಂತೆ ಮಹಿಳಾ ಸರ್ಕಾರಿ ಕಾಲೇಜಿನಲ್ಲೂ ಸಹ ಪಿ ಎಚ್ ಡಿ ಮಾಡಲು ಅವಕಾಶವಿದೆ ಎಂದು ತಿಳಿಸಿದರು.

ನಂತರ ಕಾಲೇಜಿನಲ್ಲಿ ಏರ್ಪಡಿಸಲಾಗಿದ್ದ ವಿವಿಧ ಕ್ರೀಡೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಸರ್ಕಾರಿ ಕಾಲೇಜಿನ(ಸ್ವಾಯತ್ತ) ಪ್ರಾಂಶುಪಾಲರಾದ ಡಾ. ಗುರುರಾಜ್ ಪ್ರಭು.ಕೆ, ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಡಾ. ನಿಂಗರಾಜು ಹೆಚ್.ಎಸ್, ಸಾಂಸ್ಕೃತಿಕ ವೇದಿಕೆಯ ಖಜಾಂಚಿ ಡಾ. ಮಂಗಳಮ್ಮ ಕೆ.ಎಂ, ಕ್ರಿಡಾ ಸಂಚಾಲಕ ಲೋಕೇಶ್ ಕೆ.ಆರ್, ಸ್ನಾತಕ ಮತ್ತು ಸ್ನಾತಕೊತ್ತರ ವಿಭಾಗದ ರಾಷ್ಟೀಯ ಸೇವಾ ಯೋಜನಾ ಅಧಿಕಾರಿ ಘಟಕ -೨ ಪುಷ್ಪಲತಾ, ರಾಷ್ಟ್ರೀಯ ಸೇವಾ ಯೋಜನಾ ಅಧಿಕಾರಿ ಮಾದೇಗೌಡ ಎಂ. ಸ್ಕೌಟ್ಸ್ ಮತ್ತು ಗೈಡ್ಸ್ ರೇರ?ಸ್ ಲೀಡರ್ ರೇಖಾ ಎಂ. ಎಸ್, ಯುವ ರೆಡ್ ಕ್ರಾಸ್ ಘಟಕದ ನವೀನ್ ಎಸ್. ಪತ್ರಾಂಕಿತ ವ್ಯವಸ್ಥಾಪಕರಾದ ರವಿಕಿರಣ್ ಕೆ,ಪಿ ಮತ್ತು ಹೇಮಲತಾ ಎಸ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.