ಮನೆ ರಾಷ್ಟ್ರೀಯ ಸಿಂಧೂರ ಅಳಿಸಿದವರಿಗೆ “ಆಪರೇಷನ್ ಸಿಂಧೂರ್” ಮೂಲಕ ತಕ್ಕ ಪಾಠ: ಭಾರತ ಸೇನೆಯ ತೀಕ್ಷ್ಣ ಪ್ರತಿಕ್ರಿಯೆ!

ಸಿಂಧೂರ ಅಳಿಸಿದವರಿಗೆ “ಆಪರೇಷನ್ ಸಿಂಧೂರ್” ಮೂಲಕ ತಕ್ಕ ಪಾಠ: ಭಾರತ ಸೇನೆಯ ತೀಕ್ಷ್ಣ ಪ್ರತಿಕ್ರಿಯೆ!

0

ನವದೆಹಲಿ : ಭಯೋತ್ಪಾದನೆ ನಿರ್ಮೂಲನೆಗೆ ಪಾಕಿಸ್ತಾನದ ಒಳಗೆ ನುಗ್ಗಿ ಹೊಡೆಯಲು ಸಿದ್ಧ ಎಂಬುದನ್ನು ಭಾರತೀಯ ಸೇನೆ ನಿರೂಪಿಸಿದೆ. ಸೇನಾಧಿಕಾರಿಗಳು ಆಪರೇಷನ್ ಸಿಂಧೂರ್ ಕುರಿತು ಮಾಹಿತಿ ನೀಡಿದ್ದು, ಹಿಂದೂ ಮಹಿಳೆಯರ ಕುಂಕುಮ ಅಳಿಸಿದವರನ್ನು ಪಾಕ್​ ಒಳಗೇ ನುಗ್ಗಿ ಹೊಡೆದಿದ್ದೇವೆ. ಇದೇ ಮೊದಲ ಬಾರಿಗೆ ಪಾಕಿಸ್ತಾನದ ಒಳಗೆ ನುಗ್ಗಿ ಲಷ್ಕರ್​-ಎ-ತೊಯ್ಬಾ, ಹಿಜ್ಬುಲ್ಲಾದ ಪ್ರಮುಖ ಕಚೇರಿಗಳನ್ನು ಧ್ವಂಸ ಮಾಡಲಾಗಿದೆ ಎಂದು ಕರ್ನಲ್ ಸೋಫಿಯಾ ಖುರೇಷಿ ಮಾಹಿತಿ ನೀಡಿದರು.

ಭಾರತೀಯ ಸೇನೆ ಮತ್ತು ವಾಯುಪಡೆಗಳು ಪಾಕಿಸ್ತಾನದ ಒಳಗೆ ನುಗ್ಗಿ ಉಗ್ರರ ನೆಲೆಗಳನ್ನು ಗುರಿಯಾಗಿಸಿ ಇಂದು ಬೆಳಗಿನ ಜಾವ 1.05ರಿಂದ 1.30ರ ಮಧ್ಯೆ ಕಾರ್ಯಾಚರಣೆ ನಡೆಸಿದವು. 9 ಉಗ್ರ ನೆಲೆಗಳು ಧ್ವಂಸಗೊಂಡಿದ್ದು, ಲಷ್ಕರ್-ಎ-ತೊಯ್ಬಾ, ಜೈಷ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳ ಪ್ರಮುಖ ಆಧಾರಕೇಂದ್ರಗಳು ಈ ದಾಳಿಯ ಗುರಿಯಾಗಿವೆ.

ಈ ಬಗ್ಗೆಯು ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು. “ಸಿಂಧೂರ ಅಳಿಸಿದವರಿಗೆ ನಾವು ತಕ್ಕ ಶಾಸ್ತಿಯನ್ನೇ ಮಾಡಿದ್ದೇವೆ. ಪಾಕಿಸ್ತಾನದ ಒಳಗೆ ನುಗ್ಗಿ ಉಗ್ರರ ನೆಲೆಗಳನ್ನು ನಾಶ ಮಾಡಿದ್ದೇವೆ. ಯಾವುದೇ ನಾಗರಿಕರನ್ನು ಗುರಿಯಾಗಿಸಿಲ್ಲ” ಎಂಬುದು ಅವರ ಸ್ಪಷ್ಟ ನಿಲುವಾಗಿದೆ.

ಪಾಕಿಸ್ತಾನ ಮತ್ತು ಪಿಒಕೆಯಲ್ಲಿ 9 ಗುರಿಗಳನ್ನು ಗುರುತಿಸಲಾಯಿತು ಮತ್ತು ನಾವು ಅವುಗಳನ್ನು ನಾಶಪಡಿಸಿದ್ದೇವೆ. ಲಾಂಚ್‌ಪ್ಯಾಡ್‌ಗಳು ಮತ್ತು ತರಬೇತಿ ಕೇಂದ್ರಗಳನ್ನು ಗುರಿಯಾಗಿಸಲಾಗಿತ್ತು ಎಂದು ಮಾಹಿತಿ ನೀಡಿದ್ದಾರೆ. ನಾವು ಯಾವುದೇ ನಾಗರಿಕರ ಮೇಲಾಗಲಿ ಅಥವಾ ಪಾಕ್ ಮಿಲಿಟರಿಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿಲ್ಲ, ಕೇವಲ ಉಗ್ರರ ನೆಲೆಗಳನ್ನು ಮಾತ್ರ ಧ್ವಂಸಗೊಳಿಸಿದ್ದೇವೆ ಎಂದು ಖುರೇಷಿ ಸ್ಪಷ್ಟಪಡಿಸಿದ್ದಾರೆ. ನಾಗರಿಕರಿಗೆ ಹಾನಿ ಮಾಡುವುದು ನಮ್ಮ ಉದ್ದೇಶವಲ್ಲ ಎಂದರು.

ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಅವರ ಪ್ರಕಾರ, ಇದು 26/11ನ ನಂತರದ ಅತಿ ದೊಡ್ಡ ಕಾರ್ಯಾಚರಣೆ. “ಪಹಲ್ಗಾಮ್ ದಾಳಿಯು ಹೇಡಿತನದ ಎತ್ತರವಾಗಿದೆ. ಪ್ರವಾಸಿಗರ ಮುಂದೆ ಹತ್ಯೆ ಮಾಡಿದ ಬರ್ಬರತೆಯನ್ನು ಭಾರತೀಯ ಸೇನೆ ಸ್ಫೋಟಗೊಳಿಸಿದೆ,” ಎಂದು ಅವರು ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಉತ್ತಮ ಸ್ಥಿತಿಯ ಮೇಲೆ ಪರಿಣಾಮ ಬೀರಲು ಈ ದಾಳಿಯನ್ನು ನಡೆಸಲಾಗಿದೆ. ಕಳೆದ ವರ್ಷ 2.25 ಕೋಟಿಗೂ ಹೆಚ್ಚು ಪ್ರವಾಸಿಗರು ಕಾಶ್ಮೀರಕ್ಕೆ ಬಂದಿದ್ದರು.

ಪಾಕಿಸ್ತಾನದ ಈ ನೆಲೆಗಳಲ್ಲಿ ಕುಳಿತು ಪಾಕಿಸ್ತಾನವು ಭಾರತದ ಮೇಲೆ ದಾಳಿ ಮಾಡಲು ಯೋಜನೆ ರೂಪಿಸುತ್ತಿತ್ತು ಹೀಗಾಗಿ, ಆ ದಾಳಿ ತಡೆಯಲು ಈ ದಾಳಿಯು ಅನಿವಾರ್ಯವಾಗಿತ್ತು ಎಂದರು. ಅಭಿವೃದ್ಧಿ ಮತ್ತು ಪ್ರಗತಿಗೆ ಹಾನಿ ಮಾಡುವ ಮೂಲಕ ಹಿಂದುಳಿದಿರುವಿಕೆಯನ್ನು ಕಾಯ್ದುಕೊಳ್ಳುವುದು ಈ ದಾಳಿಯ ಉದ್ದೇಶವಾಗಿದೆ. ಟಿಆರ್‌ಎಫ್ ಎಂದು ಕರೆದುಕೊಳ್ಳುವ ಗುಂಪು ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಇದನ್ನು ವಿಶ್ವಸಂಸ್ಥೆ ನಿಷೇಧಿಸಿದೆ ಮತ್ತು ಲಷ್ಕರ್‌ನೊಂದಿಗೆ ಸಂಬಂಧ ಹೊಂದಿದೆ. ಪಾಕಿಸ್ತಾನ ಮೂಲದ ಗುಂಪುಗಳಿಗೆ ಟಿಆರ್‌ಎಫ್ ಅನ್ನು ರಕ್ಷಣೆಯಾಗಿ ಬಳಸಲಾಗುತ್ತಿತ್ತು. ಲಷ್ಕರ್ ನಂತಹ ಸಂಘಟನೆಗಳು ಟಿಆರ್‌ಎಫ್ ನಂತಹ ಸಂಘಟನೆಗಳನ್ನು ಬಳಸುತ್ತಿವೆ. ಪಹಲ್ಗಾಮ್ ದಾಳಿಯ ತನಿಖೆಯು ಭಯೋತ್ಪಾದಕರಿಗೆ ಪಾಕಿಸ್ತಾನದೊಂದಿಗಿನ ಸಂಪರ್ಕವನ್ನು ಬಹಿರಂಗಪಡಿಸಿದೆ. ಪಾಕಿಸ್ತಾನ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗ ಎಂಬ ಖ್ಯಾತಿಯನ್ನು ಗಳಿಸಿದೆ.

ಭದ್ರತಾ ದೃಷ್ಟಿಯಿಂದ 11 ವಿಮಾನ ನಿಲ್ದಾಣಗಳಲ್ಲಿ ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊಂಡಿದ್ದು, ಇವು ಪಾಕ್ ಗಡಿಯ ಸನಿಹದಲ್ಲಿವೆ: ಶ್ರೀನಗರ, ಲೇಹ್, ಜೋಧ್‌ಪುರ, ಬಿಕಾನೇರ್ ಮುಂತಾದವು.