ಮನೆ ರಾಜ್ಯ ಎರಡನೇ ದೀಪಾವಳಿ, ಸಿಂಧೂರಕ್ಕೆ ಕೈ ಹಾಕಿದ ಶತ್ರುಗಳಿಗೆ ತಕ್ಕ ಪಾಠ : ಸಿ.ಟಿ. ರವಿ

ಎರಡನೇ ದೀಪಾವಳಿ, ಸಿಂಧೂರಕ್ಕೆ ಕೈ ಹಾಕಿದ ಶತ್ರುಗಳಿಗೆ ತಕ್ಕ ಪಾಠ : ಸಿ.ಟಿ. ರವಿ

0

ಚಿಕ್ಕಮಗಳೂರು: ಪಹಲ್ಗಾಮ್ ದಾಳಿಗೆ ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂಧೂರ ಗೆ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಈ ಕುರಿತು ಮಾತನಾಡಿದ ಮಾಜಿ ಸಚಿವ ಸಿ.ಟಿ. ರವಿ, “ಇಂದು ನಮಗೆ ಎರಡನೇ ದೀಪಾವಳಿ” ಎಂದಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಭಾರತೀಯರ ಸಿಂಧೂರಕ್ಕೆ ಕೈ ಹಾಕಿದವರನ್ನು ನಾವು ಅಳಿಸಿದ್ದೇವೆ. ಭಾರತೀಯ ಸೇನೆಯ ಶೂರ ಕಾರ್ಯಾಚರಣೆ ಶತ್ರುಗಳಿಗೆ ತಕ್ಕ ಪಾಠ ಕಲಿಸಿದೆ. ಮೋದಿ ಕೊಟ್ಟ ಮಾತು ತಪ್ಪುವುದಿಲ್ಲ ಎಂಬ ನಂಬಿಕೆ ಇತ್ತು, ಇಂದು ಅದು ಸಾಬೀತಾಗಿದೆ” ಎಂದರು.

ಅವರು ಮುಂದುವರಿದು, “71ರ ಯುದ್ಧದಲ್ಲಿ ನಾವು ಗೆದ್ದಿದ್ದರೂ ಸಂಧಾನದಲ್ಲಿ ಸೋತಿದ್ದೆವು. ಆದರೆ ಈ ಸಲ ಭಾರತ ಮಾತೆಯ ಹಾಗೂ ಸಹೋದರಿಯ ಸಿಂಧೂರವನ್ನು ಅಳಿಸಲು ಬಂದವರನ್ನು ನಾಶಪಡಿಸಲಾಗಿದೆ. ಪ್ರಧಾನಿ ಮೋದಿ ಮತ್ತು ಭಾರತೀಯ ಸೇನೆ ಈ ‘ಸಿಂಧೂರ’ ಹೆಸರಿಗೆ ಬೆಲೆ ತಂದುಕೊಟ್ಟಿದ್ದಾರೆ,” ಎಂದು ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ಟ್ವೀಟ್ ಅನ್ನು ಡಿಲೀಟ್ ಮಾಡಿರುವ ಕುರಿತು ಪ್ರತಿಕ್ರಿಯಿಸಿರುವ ಸಿ.ಟಿ. ರವಿ, “ಇದು ಅವರ ಬದಲಾಗುತ್ತಿರುವ ಮನಸ್ಥಿತಿಯಾಗಿದೆ. ಇಂದು ಕಾಂಗ್ರೆಸ್‌ಪಕ್ಷ ‘ಇಂಡಿಯನ್ ನ್ಯಾಷನಲ್ ಕಾಂಗ್ರೆಸ್’ ಎಂದು ಕರೆಸಿಕೊಳ್ಳಲು ಯೋಗ್ಯವಿಲ್ಲ. ಜನರಿಗೆ ಅವರ ಮೇಲಿನ ನಂಬಿಕೆ ಕುಸಿಯುತ್ತಿದೆ” ಎಂದು ವಾಗ್ದಾಳಿ ನಡೆಸಿದರು.

ಈ ದಾಳಿಯಿಂದಾಗಿ ದೇಶದ ಜನರಲ್ಲಿ ಉತ್ಸಾಹ ಮತ್ತು ಭದ್ರತೆಯ ಭಾವ ಹೆಚ್ಚಾಗಿದೆ. ಸೇನೆಯ ಕಾರ್ಯಾಚರಣೆ ಹಾಗೂ ರಾಜಕೀಯ ನಾಯಕರಿಂದ ಬಂದ ಬೆಂಬಲವು ಭಯೋತ್ಪಾದನೆಯ ವಿರುದ್ಧ ಭಾರತದ ತೀವ್ರ ನಿಲುವನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.