ನವದೆಹಲಿ : ಭಾರತವು ಪಾಕಿಸ್ತಾನದ ಉಗ್ರರ ತಾಣಗಳ ವಿರುದ್ಧ ನಡೆಸಿದ “ಆಪರೇಷನ್ ಸಿಂಧೂರ್” ಕ್ಷಿಪಣಿ ದಾಳಿಯ ನಂತರ ದೇಶದ ಉತ್ತರ ಗಡಿಭಾಗದ ವಾಯುಯಾನದಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ. ಸುರಕ್ಷತೆ ದೃಷ್ಟಿಯಿಂದ ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳಾದ ಇಂಡಿಗೋ, ಏರ್ ಇಂಡಿಯಾ ಹಾಗೂ ಇತರ ಹಲವಾರು ಸಂಸ್ಥೆಗಳು ತಮ್ಮ 165ಕ್ಕೂ ಹೆಚ್ಚು ವಿಮಾನ ಹಾರಾಟಗಳನ್ನು ಮೇ 10ರವರೆಗೆ ರದ್ದುಗೊಳಿಸಿವೆ.
ಇಂಡಿಗೋ ಸಂಸ್ಥೆಯು ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ್ದಂತೆ, ಮೇ 10ರವರೆಗೆ ಜಮ್ಮು, ಶ್ರೀನಗರ, ಲೇಹ್, ಅಮೃತಸರ, ಧರ್ಮಶಾಲಾ, ಜೋಧ್‌ಪುರ, ಬಿಕಾನೇರ್, ಗ್ವಾಲಿಯರ್, ಚಂಡೀಗಢ, ಕಿಶನ್‌ಗಢ ಹಾಗೂ ರಾಜ್‌ಕೋಟ್‌ಗೆ ಹೋಗುವ ಹಾಗೂ ಅಲ್ಲಿಂದ ಹೊರಡುವ ಎಲ್ಲಾ ವಿಮಾನ ಹಾರಾಟಗಳನ್ನು ಸ್ಥಗಿತಗೊಳಿಸಿದೆ. ಈ ತಾತ್ಕಾಲಿಕ ನಿರ್ಧಾರವನ್ನು ವಾಯುಸೇನೆ ಹಾಗೂ ನಾಗರಿಕ ವಿಮಾನಯಾನ ಇಲಾಖೆಯ ಮಾರ್ಗದರ್ಶನದಂತೆ ತೆಗೆದುಕೊಳ್ಳಲಾಗಿದೆ ಎಂದು ಕಂಪೆನಿ ತಿಳಿಸಿದೆ.
ಪರಿಸ್ಥಿತಿ ಸೂಕ್ಷ್ಮತೆಯನ್ನು ಗಮನಿಸಿ ಇತರ ನಿಲ್ದಾಣಗಳಿಗೆ ವಿಮಾನ ಹಾರಾಟವನ್ನು ಹೊಂದಾಣಿಕೆ ಮಾಡಲಾಗುವುದು. ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ಪ್ರಯಾಣಿಕರು ತಮ್ಮ ಪ್ರಯಾಣದ ಸ್ಥಿತಿಯನ್ನು ಪರಿಶೀಲಿಸುವಂತೆ ಗ್ರಾಹಕರಿಗೆ ಇಂಡಿಗೋ ಸಲಹೆ ನೀಡಿದೆ.
ಅಲ್ಲದೆ, ಏರ್ ಇಂಡಿಯಾ ಸಂಸ್ಥೆಯು ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟಣೆ ಹೊರಡಿಸಿ, ಜಮ್ಮು, ಲೇಹ್, ಶ್ರೀನಗರ, ಜೋಧ್‌ಪುರ, ಭುಜ್, ಅಮೃತಸರ, ಚಂಡೀಗಢ ಹಾಗೂ ಜಾಮ್‌ನಗರ ನಿಲ್ದಾಣಗಳಿಗೆ ಮೇ 10ರವರೆಗೆ ಯಾವುದೇ ವಿಮಾನ ಹಾರಾಟ ಇರುವುದಿಲ್ಲ ಎಂದು ತಿಳಿಸಿದೆ. ಈ ನಿರ್ಧಾರ, ದೇಶದ ಗಡಿಭಾಗದ ಉದ್ವಿಗ್ನ ಪರಿಸ್ಥಿತಿಯನ್ನು ಪರಿಗಣಿಸಿ ಕೈಗೊಳ್ಳಲಾಗಿದೆ.
ಇನ್ನೂ ʻಆಪರೇಷನ್ ಸಿಂಧೂರʼ ಬೆನ್ನಲ್ಲೇ ಏರ್ ಇಂಡಿಯಾ, ಇಂಡಿಗೋ, ಸ್ಪೈಸ್‌ಜೆಟ್, ಏರ್ ಇಂಡಿಯಾ ಎಕ್ಸ್‌ಪ್ರೆಸ್, ಆಕಾಶ ಏರ್ ಮತ್ತು ಕೆಲವು ವಿದೇಶಿ ವಿಮಾನಯಾನ ಸಂಸ್ಥೆಗಳು ವಿವಿಧ ವಿಮಾನ ನಿಲ್ದಾಣಗಳಿಗೆ ತಮ್ಮ ಸೇವೆಗಳನ್ನು ರದ್ದುಗೊಳಿಸಿವೆ. ಒಟ್ಟು 18 ವಿಮಾನ ನಿಲ್ದಾಣಗಳ ಕಾರ್ಯಾಚರಣೆಯನ್ನ ರದ್ದುಗೊಳಿಸಲಾಗಿದೆ, ಈ ಪೈಕಿ ಶ್ರೀನಗರ, ಲೇಹ್, ಜಮ್ಮು, ಅಮೃತಸರ, ಪಠಾಣ್‌ಕೋಟ್, ಚಂಡೀಗಢ, ಜೋಧ್‌ಪುರ, ಜೈಸಲ್ಮೇರ್, ಶಿಮ್ಲಾ, ಧರ್ಮಶಾಲಾ ಮತ್ತು ಜಾಮ್‌ನಗರ ನಿಲ್ದಾಣಗಳೂ ಸೇರಿವೆ. ಒಟ್ಟಾರೆಯಾಗಿ ವಿವಿಧ ವಿಮಾನಯಾನ ಸಂಸ್ಥೆಗಳ 200ಕ್ಕೂ ಹೆಚ್ಚು ವಿಮಾನ ಹಾರಾಟವನ್ನ ರದ್ದುಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.














