ಮಂಡ್ಯ: ಗೌರವಾನ್ವಿತ ಉಪಲೋಕಾಯುಕ್ತರವರಾದ ನ್ಯಾಯಮೂರ್ತಿ ಬಿ.ವೀರಪ್ಪ ಅವರು ಮೇ 28 ರಿಂದ 31 ರವರೆಗೆ ಮಂಡ್ಯ ಜಿಲ್ಲೆಗೆ ಸಂಬಂಧಿಸಿದಂತೆ ತನಿಖೆಗೆ ಬಾಕಿ ಇರುವ ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ ಹಾಗೂ ಸಾರ್ವಜನಿಕರಿಂದ ದೂರು ಸಹ ಸ್ವೀಕರಿಸಿ ವಿಚಾರಣೆ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ: ಕುಮಾರ ಅವರು ತಿಳಿಸಿದರು.
ಇಂದು ಮೇ.7 ರಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅದರ ಪೂರ್ವ ಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಉಪಲೋಕಾಯುಕ್ತರು ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರಿಗೆ ಸೂಕ್ತ ವ್ಯವಸ್ಥೆಯನ್ನು ಕಲ್ಪಿಸಲು ಅಪರ ಜಿಲ್ಲಾಧಿಕಾರಿಗಳು, ಉಪವಿಭಾಗಾಧಿಕಾರಿ, ಆಹಾರ ಇಲಾಖೆಯ ಜಂಟಿ ನಿರ್ದೇಶಕರು, ಹಾಗೂ ತಹಸೀಲ್ದಾರ್ ಒಳಗೊಂಡಂತೆ ಸಮಿತಿಯನ್ನು ರಚಿಸಿದರು.
ಉಪಲೋಕಾಯುಕ್ತರು ಆಗಮಿಸಿದ ಸಂದರ್ಭದಲ್ಲಿ ಅವರು ವಾಸ್ತವ್ಯ ಹೂಡುವ ಪ್ರವಾಸಿ ಮಂದಿರದಲ್ಲಿ ಸ್ವಚ್ಚತೆಯನ್ನು ಕಾಪಾಡಬೇಕು, ಲೋಕಾಯುಕ್ತರ ಜೊತೆ ಆಗಮಿಸಲಿರುವ ಅಧಿಕಾರಿಗಳ ಪಟ್ಟಿಯನ್ನು ತೆಗೆದುಕೊಂಡು ಸೂಕ್ತ ಕೊಠಡಿಯ ವ್ಯವಸ್ಥೆ ಮಾಡಬೇಕು ಎಂದರು.
ಉಪಲೋಕಾಯುಕ್ತರಾದ ಬಿ. ವೀರಪ್ಪ ಅವರಿಗೆ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು., ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಲೋಕಾಯುಕ್ತ ಪ್ರಕರಣಗಳ ವಿಚಾರಣೆ ನಡೆಸಲಾಗುವುದು, ಭಾಗವಹಿಸುವ ಸಾರ್ವಜನಿಕರ ಬ್ಯಾರಿಕೇಡ್ ವ್ಯವಸ್ಥೆಯ ಮೂಲಕ ವಿವಿಧ ಗುಂಪುಗಳಾಗಿ ರಚಿಸಿ ಆಸನ ವ್ಯವಸ್ಥೆ ಕಲ್ಪಿಸಲಾಗುವುದು, ಆನ್ ಲೈನ್ ತಂತ್ರಾಂಶದಲ್ಲಿ ಸಾರ್ವಜನಿಕರ ವಿವರಗಳು ನೊಂದಣಿ ಮಾಡಲಾಗುವುದು, ಎಂದು ಹೇಳಿದರು.
ಎಲ್ಲಾ ಗ್ರಾಮ ಪಂಚಾಯಿತಿಯ ಪಿ.ಡಿ.ಓ.ಗಳು ಉಪಲೋಕಾಯುಕ್ತರು ಆಗಮಿಸುವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲು ಬ್ಯಾನರ್ ಗಳನ್ನು ಅಳವಡಿಸಬೇಕು, ಲೋಕಾಯುಕ್ತ ಪ್ರಕರಣಗಳ ವಿಚಾರಣೆ ನಡೆಯುವ ಸ್ಥಳದಲ್ಲಿ ಕಂಪ್ಯೂಟರ್, ಕಂಪ್ಯೂಟರ್ ಆಪರೇಟರ್ಗಳು, ಇಂಟರ್ನೆಟ್, ಹಾಗೂ ಸ್ಟೆನೋಗ್ರಾಫರ್ ಇರಬೇಕು, ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ, ಉಪ ವಿಭಾಗಾಧಿಕಾರಿ ಶಿವಮೂರ್ತಿ, ಮಂಡ್ಯ ತಹಶೀಲ್ದಾರ್ ಶಿವಕುಮಾರ್ ಬಿರಾದರ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಕೃಷ್ಣಕುಮಾರ್, ನಗರಸಭೆ ಪೌರಾಯುಕ್ತ ಪಂಪಶ್ರೀ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.














