ಶ್ರೀನಗರ : ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಕದನ ವಿರಾಮ ಉಲ್ಲಂಘನೆಯ ಹಿನ್ನೆಲೆಯಲ್ಲಿ ಭಾರತೀಯ ಸೇನೆಯ ಯುವ ಯೋಧನೊಬ್ಬ ಶಹಿದರಾಗಿರುವ ದುರಂತ ಸುದ್ದಿ ಹೊರಬಿದ್ದಿದೆ. ನಿನ್ನೆ ತಡರಾತ್ರಿ ಜಮ್ಮು ಮತ್ತು ಕಾಶ್ಮೀರದ ಪೂಂಚ್ ಸೆಕ್ಟರ್ನಲ್ಲಿ ಪಾಕಿಸ್ತಾನಿ ಸೇನೆ ನಡೆಸಿದ ಶೆಲ್ ದಾಳಿಯಲ್ಲಿ 32 ವರ್ಷದ ಲಾನ್ಸ್ ನಾಯಕ್ ದಿನೇಶ್ ಕುಮಾರ್ ಶರ್ಮಾ ಹುತಾತ್ಮರಾಗಿದ್ದಾರೆ.
ಇತ್ತೀಚೆಗೆ ಭಾರತವು ಯಶಸ್ವಿಯಾಗಿ ನಡೆಸಿದ “ಆಪರೇಷನ್ ಸಿಂಧೂರ್” ಎಂಬ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆಗೂ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಈ ಕೃತ್ಯವೆಸಗಿದಂತೆ ತೋರುತ್ತಿದೆ. ನಿನ್ನೆ ತಡರಾತ್ರಿ ಆರಂಭವಾದ ಶೆಲ್ ದಾಳಿಯಲ್ಲಿ ಭಾರತ-ಪಾಕಿಸ್ತಾನ ಗಡಿಯಲ್ಲಿ ಇರುವ ಮುಂಚೂಣಿ ಸೇನಾ ಚೆಕ್ಪೋಸ್ಟ್ಗಳತ್ತ ಗುರಿಯಾಗಿಸಿದ ಮೋರ್ಟಾರ್ ಮತ್ತು ಗನ್ ದಾಳಿಗಳು ತೀವ್ರ ಆತಂಕವನ್ನು ಉಂಟುಮಾಡಿವೆ.
ಹುತಾತ್ಮರಾದ ಲಾನ್ಸ್ ನಾಯಕ್ ದಿನೇಶ್ ಕುಮಾರ್, ಹರಿಯಾಣದ ಪಲ್ವಾಲ್ ಜಿಲ್ಲೆಯ ಮೊಹಮ್ಮದ್ಪುರ ಗ್ರಾಮದವರಾಗಿದ್ದು, ಭಾರತೀಯ ಸೇನೆಯ 5ನೇ ಫೀಲ್ಡ್ ರೆಜಿಮೆಂಟ್ನಿಂದ ಸೇವೆ ಸಲ್ಲಿಸುತ್ತಿದ್ದರು. ಸೇನೆಗಾಗಿ ನಿರಂತರ ಕಠಿಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ತಮ್ಮ ಶೌರ್ಯ ಮತ್ತು ಬದ್ಧತೆಯಿಂದ ಗುರುತಿಸಿಕೊಂಡಿದ್ದರು. ಅವರ ಪುಣ್ಯಸ್ಮರಣೆಗೆ ಸೇನೆ ಹಾಗೂ ರಾಷ್ಟ್ರೀಯ ನಾಯಕರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಪಾಕಿಸ್ತಾನದ ಈ ಕೃತ್ಯವನ್ನು ಭಾರತೀಯ ಸೇನೆ ತೀವ್ರವಾಗಿ ಖಂಡಿಸಿದ್ದು, ಇದು ಉದ್ದೇಶಪೂರ್ವಕ ಪ್ರಚೋದನೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಭಾರತದ ಭದ್ರತಾ ಸಂಸ್ಥೆಗಳು ಗಡಿಭಾಗದಲ್ಲಿ ಗಡಿಯ ಕಣ್ಗಾವಲು ಕಠಿಣಗೊಳಿಸಿರುವುದಾಗಿ ತಿಳಿದುಬಂದಿದೆ. ಸೇನೆ ಈ ಉಲ್ಲಂಘನೆಯ ವಿರುದ್ಧ ಸೂಕ್ತ ಪ್ರತಿಕ್ರಿಯೆ ನೀಡಲಿದೆ ಎಂಬುದು ಮೂಲಗಳ ಮಾತು.














