ಮೈಸೂರು : ಮೈಸೂರಿಗರಿಗೆ, ಪ್ರವಾಸಿಗರಿಗೆ ಭರ್ಜರಿ ಮನೋರಂಜನೆ ನೀಡುವ ಸಲುವಾಗಿ ದಸರಾ ವಸ್ತು ಪ್ರದರ್ಶನದಲ್ಲಿ ಮೇ 9 ರಿಂದ ಜೂನ್ 17 ರವರೆಗೆ ಫನ್ ಫೇರ್ ಆಯೋಜನೆ ಮಾಡಲಾಗಿದೆ ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆಯೂಬ್ ಖಾನ್, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ ಮತ್ತು ಫನ್ ಫೇರ್ ಎಂಟರ್ ಟೇನರ್ಸ್ ಸಂಯುಕ್ತ ಆಶ್ರಯದಲ್ಲಿ ಒಟ್ಟು 40 ದಿನಗಳ ಕಾಲ ಫನ್ ಫೇರ್ ವಸ್ತು ಪ್ರದರ್ಶನ ಆಯೋಜಿಸಲಾಗಿದೆ.
ಪ್ರತಿದಿನ ಅಪರಾಹ್ನ 3 ಗಂಟೆಯಿಂದ ರಾತ್ರಿ 10 ಗಂಟೆಯರೆಗೆ ಫನ್ ಫೇರ್ ವಸ್ತು ಪ್ರದರ್ಶನ ನಡೆಯಲಿದೆ. ವಿಶೇಷ ಆಕರ್ಷಣೆಯಾಗಿ ನಯಾಗರ ಜಲಪಾತದ ಮಾದರಿ ನಿರ್ಮಾಣ ಮಾಡಲಾಗಿದೆ. ಇದರ ಜೊತೆಗೆ ಮನೋರಂಜನೆ ಆಟಿಕೆಗಳು, ವಾಣಿಜ್ಯ ಮಳಿಗೆಗಳು, ಫುಡ್ ಕೋರ್ಟ್ಸ್, ಲೈಟಿಂಗ್ಸ್ ಕೂಡ ಫನ್ ಫೇರ್ ನ ಆಕರ್ಷಣೆಯಾಗಿದೆ ಎಂದು ತಿಳಿಸಿದರು.
ವಯಸ್ಕರಿಗೆ 50 ರೂಪಾಯಿ, ಮಕ್ಕಳಿಗೆ 30 ರೂಪಾಯಿ ಪ್ರವೇಶ ಶುಲ್ಕ ನಿಗದಿ ಮಾಡಲಾಗಿದ್ದು, 5 ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಫನ್ ಫೇರ್ ವಸ್ತು ಪ್ರದರ್ಶನದಿಂದ 34 ರಿಂದ 35 ಲಕ್ಷ ಆದಾಯದ ನಿರೀಕ್ಷೆ ಮಾಡಲಾಗಿದೆ ಎಂದು ಅಯೂಬ್ ಖಾನ್ ತಿಳಿಸಿದರು.
ಕುರಿತು ಭಾರತೀಯ ಸೇನೆಯ ಆಪರೇಷನ್ ಸಿಂಧೂರ ಕಾರ್ಯಾಚರಣೆ ಶ್ಲಾಘಿಸಿದ ಅಯೂಬ್ ಖಾನ್, ನಮ್ಮ ದೇಶದ ಕೇವಲ ಇಬ್ಬರು ಮಹಿಳಾ ಸೇನಿಗಳು ಉಗ್ರರಿಗೆ ತಕ್ಕ ಉತ್ತರ ಕೊಟ್ಟಿದ್ದಾರೆ. ಭಾರತೀಯ ಸೇನೆಗೆ ನನ್ನದೊಂದು ಸಲಾಂ.
ಕರ್ನಲ್ ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗ್ ಮಹಿಳಾ ಸೇನಾನಿಗಳಿಗೆ ಧನ್ಯವಾದಗಳ ತಿಳಿಸುತ್ತೇನೆ. ಭಾರತದ ತಂಟೆಗೆ ಯಾವಾಗಲೂ ಬಾರದಂತೆ ಕ್ರಮವನ್ನ ಕೈಗೊಂಡಿದೆ. ಇದನ್ನ ಇಷ್ಟಕ್ಕೆ ನಿಲ್ಲಿಸಬಾರದು, ಉಗ್ರವಾದವನ್ನ ಬೇರು ಸಹಿತ ಕಿತ್ತುಹಾಕಿ ಅವರನ್ನ ಸರ್ವನಾಶ ಮಾಡುವವರೆಗೂ ಕಾರ್ಯಾಚರಣೆ ನಿಲ್ಲಬಾರದು. ಈ ಮೂಲಕ ಭಾರತ ಇಡೀ ವಿಶ್ವಕ್ಕೆ ಒಂದು ಸ್ಪಷ್ಟ ಸಂದೇಶ ರವಾನಿಸಿದೆ ಎಂದರು.














