ಮನೆ ರಾಜ್ಯ ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮಕ್ಕೆ ಸೂಚನೆ : ಕಮಿಷನರ್ ಬಿ.ದಯಾನಂದ್ ಎಚ್ಚರಿಕೆ!

ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಮಕ್ಕೆ ಸೂಚನೆ : ಕಮಿಷನರ್ ಬಿ.ದಯಾನಂದ್ ಎಚ್ಚರಿಕೆ!

0

ಬೆಂಗಳೂರು : ಪಹಲ್ಗಾಮ್ ಉಗ್ರರ ದಾಳಿಗೆ ಭಾರತೀಯ ಸೇನೆಯಿಂದ ಆಪರೇಷನ್ ಸಿಂಧೂರ್ ಮೂಲಕ ಈಗಾಗಲೇ ಪ್ರತ್ಯುತ್ತರ ನೀಡಲಾಗಿದೆ. ಸದ್ಯ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಯುದ್ಧದ ಭೀತಿ ಸೃಷ್ಟಿಯಾಗಿದೆ. ಹಾಗಾಗಿ ಭಾರತದ ಗಡಿ ಭಾಗಗಳಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿವೆ. ಇತ್ತ ಕರ್ನಾಟದಲ್ಲೂ ಪೊಲೀಸ್​ ಇಲಾಖೆ ಅಲರ್ಟ್ ಆಗಿದ್ದು, ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕ್ರಮಕೈಗೊಳ್ಳುವಂತೆ ಸಿಬ್ಬಂದಿಗೆ ಬೆಂಗಳೂರು ನಗರ ಪೊಲೀಸ್ ಕಮಿಷನರ್​ ದಯಾನಂದ್ ಹಲವು ಸೂಚನೆ ನೀಡಿದ್ದಾರೆ.

ನಗರದಲ್ಲಿ ಮಾಸಿಕ ಕವಾಯತು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಗಡಿ ಭಾಗಗಳಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಅವಶ್ಯ ಸಾಮಾಗ್ರಿ ಶೇಖರಿಸಲಾಗುತ್ತಿದೆ ಎನ್ನುವ ಮಾಹಿತಿ ಕೇಳಿ ಬರುತ್ತಿದೆ. ಹಾಗಾಗಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಸೂಚಿಸಲಾಗಿದೆ. ಎಲ್ಲಾ ಕಡೆ ಸಾಮಾನ್ಯವಾದ ಭದ್ರತೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.

ಗಡಿಯಲ್ಲಿ ಉದ್ವಿಗ್ನತೆ ಬಗ್ಗೆ ಎಲ್ಲಾ ಪೊಲೀಸರಿಗೂ ತಿಳಿದಿದೆ. ಪೊಲೀಸರು ಜಾಗರೂಕತೆಯಿಂದ ಕರ್ತವ್ಯ ನಿರ್ವಹಿಸಬೇಕು. ಜನರು ಆತಂಕಕ್ಕೆ ಒಳಗಾಗದ ರೀತಿ ತಿಳಿವಳಿಕೆ ನೀಡಬೇಕು. ಸುಳ್ಳು ಸುದ್ದಿ ಹರಡದಂತೆ ಕ್ರಮ ಕೈಗೊಳ್ಳಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಸಾರ್ವಜನಿಕರಿಗೆ ಸರಿಯಾದ ಮಾಹಿತಿಯನ್ನು ನೀಡಬೇಕು. ಬೆಂಗಳೂರಿನಲ್ಲಿ ಡಿಸಿಪಿಗಳು ಹಾಗೂ ಎಸಿಪಿಗಳು ನಿಗಾ ವಹಿಸಬೇಕು. ಕೇಂದ್ರ, ರಾಜ್ಯ ಸರ್ಕಾರದ ಸೂಚನೆ ಪಾಲಿಸಬೇಕು. ಮಾಕ್ ಡ್ರಿಲ್ ಬಗ್ಗೆ ಜನರಿಗೆ ಪೊಲೀಸರು ಅರಿವು ಮೂಡಿಸಬೇಕು ಎಂದು ಹಲವು ಸೂಚನೆಗಳನ್ನು ನೀಡಿದ್ದಾರೆ.

ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಹೆಚ್ಚುವರಿ ಭದ್ರತೆ ಬಗ್ಗೆ ಸಿಎಂ ಸಿದ್ದರಾಮಯ್ಯ ಜತೆ ಚರ್ಚೆ ಮಾಡುತ್ತೇನೆ. ಇಂದು ಸಂಪುಟ ಸಭೆಯಿದೆ. ಅಲ್ಲೂ ಭದ್ರತೆ ಬಗ್ಗೆ ಪ್ರಸ್ತಾಪ ಆಗಬಹುದು. ನಾವು ಎಲ್ಲಾ ಎಚ್ಚರಿಕೆ ಕ್ರಮ ತಗೊಂಡಿದ್ದೇವೆ. ಸ್ಥಳೀಯ ಪೋಲೀಸರಿಗೂ ಎಚ್ಚರಿಕೆ ವಹಿಸುವಂತೆ ಸೂಚನೆ ಕೊಡಲಾಗಿದೆ. ಜಲಾಶಯಗಳು, ಅಣೆಕಟ್ಟುಗಳು ಮತ್ತು ಪ್ರಮುಖ ಸ್ಥಳಿಗಳಿಗೆ ಭದ್ರತೆ ಕೊಟ್ಟಿದ್ದೇವೆ ಎಂದರು.