ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗಂಡಮಗೆರೆ ಕ್ರಾಸ್ ಸಮೀಪದ ನೆಲ್ಲುಕುಂಟೆ ಸರ್ಕಲ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಇಬ್ಬರು ಯುವಕರು ಸ್ಥಳದಲ್ಲೇ ದಾರುಣ ಸಾವನ್ನಪ್ಪಿರುವ ಘಟನೆ ತಡರಾತ್ರಿ ನಡೆದಿದೆ. ಅಪಘಾತದ ಹಿನ್ನೆಲೆ ತ್ರಿಬಲ್ ರೈಡಿಂಗ್ ಹಾಗೂ ನಿಯಂತ್ರಣ ತಪ್ಪಿದ ಬೈಕ್ ಮರಕ್ಕೆ ಡಿಕ್ಕಿ ಹೊಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೃತಪಟ್ಟವರು ಗಂಡಮಗೆರೆ ಗ್ರಾಮದ ವೆಂಕಟೇಶ್ (ವಯಸ್ಸು 45) ಮತ್ತು ಶಿವಪುರ ಗ್ರಾಮದ ರಕ್ಷಿತ್ (ವಯಸ್ಸು 25) ಎಂದು ಗುರುತಿಸಲಾಗಿದೆ. ಇನ್ನು ಮೂರನೇ ವ್ಯಕ್ತಿಯಾದ ಮುತ್ತೂರು ಗ್ರಾಮದ ಮತ್ತೊಬ್ಬ ವೆಂಕಟೇಶ್ (45) ಗಂಭೀರ ಗಾಯಗೊಂಡು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಪೊಲೀಸ್ ವರದಿ ಪ್ರಕಾರ, ಮೂವರು ವ್ಯಕ್ತಿಗಳು ಒಂದೇ ಬೈಕ್‌ನಲ್ಲಿ ತಡರಾತ್ರಿ ಗಂಡಮಗೆರೆ ಕ್ರಾಸ್‌ನಿಂದ ನೆಲ್ಲುಕುಂಟೆ ಕಡೆಗೆ ತೆರಳುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ, ಬೈಕ್ ರಸ್ತೆ ಬದಿಯಲ್ಲಿದ್ದ ದೊಡ್ಡ ಮರಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಡಿಕ್ಕಿಯ ಪರಿಣಾಮ ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿ, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನೆ ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ. ಪ್ರಾಥಮಿಕ ತನಿಖೆ ಪ್ರಕಾರ, ಹೆಚ್ಚಿನ ವೇಗ ಹಾಗೂ ತ್ರಿಬಲ್ ರೈಡಿಂಗ್ ಕಾರಣದಿಂದಾಗಿ ಅಪಘಾತ ಸಂಭವಿಸಿರುವ ಸಾಧ್ಯತೆ ಇದೆ.














