ನವದೆಹಲಿ: ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ಸೇನಾ ಕಾರ್ಯಾಚರಣೆಯ ಬಗ್ಗೆ ಸಿಡಿಎಸ್ ಮತ್ತು ಮೂರು ಸೇನಾ ಮುಖ್ಯಸ್ಥರ ಜೊತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೈವೋಲ್ಟೇಜ್ ಸಭೆ ನಡೆಸಿದ್ದಾರೆ.
ದೆಹಲಿಯಲ್ಲಿ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಮತ್ತು ಮೂರು ಸೇನಾ ಮುಖ್ಯಸ್ಥರೊಂದಿಗೆ 2 ಗಂಟೆಗಳ ಕಾಲ ಈ ಸಭೆ ನಡೆದಿದೆ. ಈ ವೇಳೆ ಪಾಕ್ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ಭಾರತ ಯಶಸ್ವಿಯಾಗಿ ತಡೆದ ಬಗ್ಗೆ ಅವರು ಮಾಹಿತಿ ಪಡೆದರು. ʻಆಪರೇಷನ್ ಸಿಂಧೂರʼ ಬಳಿಕ ಗಡಿಯಲ್ಲಿ ಭದ್ರತಾ ಪರಿಸ್ಥಿತಿಯ ಬಗ್ಗೆ ನಿರ್ಣಯಿಸಲು ಈ ಸಭೆ ನಡೆಸಲಾಗಿದೆ ಎಂದು ವರದಿಯಾಗಿದೆ.
ಗುರುವಾರ ರಾತ್ರಿ ಪಾಕ್ ವಿರುದ್ಧ ಭಾರತ ಮಿಸೈಲ್‌ಗಳ ಮಳೆ ಸುರಿಸಿದೆ. ಈ ವೇಳೆ ಪಾಕ್ ಸಹ ದಾಳಿ ನಡೆಸಿದೆ. ಆದರೆ ಭಾರತೀಯ ಸೇನೆ ಆ ದಾಳಿಯನ್ನು ವಿಫಲಗೊಳಿಸಿದೆ. ಇದರ ಬೆನ್ನಲ್ಲೇ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದ್ದು, ಪಾಕ್ ತತ್ತರಿಸಿ ಹೋಗಿದೆ. ಇಷ್ಟಾಗಿಯೂ ಕಿತಾಪತಿ ಬಿಡದ ಪಾಕಿಸ್ತಾನ ಮತ್ತೆ ಭಾರತದ ಜಮ್ಮುವಿನ ಮೇಲೆ ದಾಳಿಗೆ ವಿಫಲಯತ್ನ ನಡೆಸಿದೆ.
ಜಮ್ಮುವಿನಲ್ಲಿ ಇದುವರೆಗೆ ಪಾಕಿಸ್ತಾನದ 50ಕ್ಕೂ ಹೆಚ್ಚು ಡ್ರೋನ್ ದಾಳಿಯನ್ನು ಭಾರತೀಯ ವಿಫಲಗೊಳಿಸಿದೆ. ಭಾರತೀಯ ಗಡಿ ನಿಯಂತ್ರಣ ರೇಖೆ ಹಾಗೂ ವಿವಿಧ ಪ್ರದೇಶಗಳನ್ನು ಗುರಿಯಾಗಿಸಿ ಪಾಕಿಸ್ತಾನ ಡ್ರೋನ್ ದಾಳಿ ನಡೆಸಿತ್ತು. ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲ, ಜಲಂಧರ್, ಲುಧಿಯಾನ, ಆದಂಪುರ, ಬಟಿಂಡಾ, ಚಂಡೀಗಢ, ನಾಲ್, ಫಲೋಡಿ, ಉತ್ತರಲೈ, ಭುಜ್ ಸೇರಿ ಒಟ್ಟು 15 ನಗರಗಳ ಮೇಲೂ ದಾಳಿಗೆ ಸಂಚುಮಾಡಿತ್ತು. ಆದರೆ ಭಾರತೀಯ ಸೇನೆ ಎಲ್ಲಾ ದಾಳಿಯನ್ನು ವಿಫಲಗೊಳಿಸಿದೆ.
ಮೇ 7 ರಂದು ಭಾರತ ಪಾಕಿಸ್ತಾನ ಹಾಗೂ ಪಿಒಕೆಯಲ್ಲಿದ್ದ 9 ಭಯೋತ್ಪಾದಕರ ಶಿಬಿರಗಳ ಮೇಲೆ ಆಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿ ಉಗ್ರರನ್ನು ಧ್ವಂಸಮಾಡಿತ್ತು. ಇದಕ್ಕೆ ಪ್ರತಿಯಾಗಿ ಪಾಕ್ ಅಮಾಯಕ ನಾಗರಿಕರ ಮೇಲೆ ದಾಳಿ ಮಾಡಿ 16 ಜನರನ್ನು ಕೊಂದಿತ್ತು.














