ಬೆಂಗಳೂರು : ಎಣ್ಣೆ ಪಾರ್ಟಿ ವೇಳೆ ಗಲಾಟೆ ನಡೆದು ಸಿಮೆಂಟ್ ಇಟ್ಟಿಗೆಯಿಂದ ತಲೆಗೆ ಹೊಡೆದು ಟೆಕ್ಕಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಮಡಿವಾಳದ ವೆಂಕಟೇಶ್ವರ ಲೇಔಟ್‌ನಲ್ಲಿ ನಡೆದಿದೆ.
ಮೃತ ವ್ಯಕ್ತಿ ಮಾರ್ಟಿನ್ ಸೈಮನ್ (29) ಎಂಬುವರು ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಶಂಕಿತ ಆರೋಪಿ ಇನ್ಫೆಂಟ್ ರಾಜ್ ಅವರ ಜೊತೆಗೆ ಅದೇ ಕಟ್ಟಡದಲ್ಲಿ ಬಾಡಿಗೆಗೆ ವಾಸವಾಗಿದ್ದವರು. ನಿನ್ನೆ ಸಂಜೆ ಇಬ್ಬರೂ ಕಟ್ಟಡದ ಟೆರೆಸ್‌ನಲ್ಲಿ ಪಾರ್ಟಿ ಮಾಡುತ್ತಿದ್ದು, ಸುಮಾರು ರಾತ್ರಿ 10 ಗಂಟೆ ಸುಮಾರಿಗೆ ಅವರ ಮಧ್ಯೆ ಜಗಳ ಆರಂಭವಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.
ಜಗಳ ತೀವ್ರ ಸ್ವರೂಪ ತಾಳಿದ ನಂತರ, ಅಲ್ಲೇ ಇದ್ದ ಸಿಮೆಂಟ್ ಇಟ್ಟಿಗೆಯನ್ನು ಬಳಸಿಕೊಂಡು ತಲೆಗೆ ಹೊಡೆದು ಮಾರ್ಟಿನ್ ಸೈಮನ್ ಅವರನ್ನು ಹತ್ಯೆ ಮಾಡಲಾಗಿದೆ ಎಂಬ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದ ತಕ್ಷಣ ಇನ್ಫೆಂಟ್ ರಾಜ್ ಸ್ಥಳದಿಂದ ಪರಾರಿಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಮಡಿವಾಳ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಘಟನಾ ಸ್ಥಳವನ್ನು ಪರಿಶೀಲಿಸಿ, ಪ್ರಕರಣದ ನಿಖರತೆ ತಿಳಿದುಕೊಳ್ಳಲು ತನಿಖೆ ಆರಂಭಿಸಿದ್ದಾರೆ. ಪೋಸ್ಟ್‌ಮಾರ್ಟಂ ವರದಿ ಬಂದ ನಂತರ ಇನ್ನಷ್ಟು ವಿವರ ಸ್ಪಷ್ಟವಾಗಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.














