ಬೆಂಗಳೂರು: ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಕರ್ನಾಟಕದಲ್ಲಿ ಕೂಡ ಎಲ್ಲ ರೀತಿಯ ಮುಂಜಾಗ್ರತ ಕ್ರಮಗಳನ್ನು ರಾಜ್ಯ ಸರ್ಕಾರ ಕೈಗೊಂಡಿದ್ದು, ಕೇಂದ್ರ ಸರ್ಕಾರದ ಸೂಚನೆಗಳಿಗೆ ಅನುಗುಣವಾಗಿ ಎಲ್ಲಾ ರೀತಿಯಲ್ಲಿ ಸಿದ್ದತೆಗಳನ್ನು ರಾಜ್ಯ ಗೃಹ ಇಲಾಖೆ ಮಾಡಿಕೊಂಡಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೃಹ ಸಚಿವರು, “ಸಧ್ಯದ ಪರಿಸ್ಥಿತಿಯು ಎಂತಹತ್ತ ಹೋಗುತ್ತದೊ ಯಾರಿಗೂ ತಿಳಿಯದು. ಆದ್ದರಿಂದ ನಾವು ಮುನ್ನೆಚ್ಚರಿಕೆಯ ದೃಷ್ಟಿಯಿಂದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ. ಎಲ್ಲ ಪೊಲೀಸ್ ಸಿಬ್ಬಂದಿಗೂ ಈ ವೇಳೆ ಕರ್ತವ್ಯದ ಮೇಲೆಯೇ ಇರುವುದು ಅತ್ಯಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ರಜೆಯನ್ನು ರದ್ದುಪಡಿಸಲಾಗಿದೆ,” ಎಂದು ಹೇಳಿದ್ದಾರೆ.
ಈ ತೀರ್ಮಾನವು ಕೇಂದ್ರ ಸರ್ಕಾರದ ಸೂಚನೆಗಳ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿದೆ. ರಾಷ್ಟ್ರಮಟ್ಟದಲ್ಲಿ ಭದ್ರತಾ ಕ್ರಮಗಳನ್ನು ಮತ್ತಷ್ಟು ಗಟ್ಟಿಯಾಗಿ ಅನುಸರಿಸಲಾಗುತ್ತಿದ್ದು, ರಾಜ್ಯವೂ ಕೂಡ ತನ್ನ ಮಟ್ಟಿನಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
“ಕೊಸ್ಟಲ್ ಗಾರ್ಡ್‌ಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ನಾವೂ ಸಹ ಕೇಂದ್ರದ ನಿರ್ದೇಶನದಂತೆ ನಿಗಾ ಕ್ರಮಗಳನ್ನು ಕೈಗೊಂಡಿದ್ದೇವೆ. ಎಲ್ಲ ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಶಸ್ತ್ರಸಜ್ಜಿತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ,” ಎಂದು ಅವರು ಮಾಹಿತಿ ನೀಡಿದರು.
ಕರ್ನಾಟಕದ ಕರಾವಳಿ ಪ್ರದೇಶಗಳಲ್ಲಿ ವಿಶೇಷ ನಿಗಾ ಕ್ರಮಗಳನ್ನು ಜಾರಿಗೊಳಿಸಲಾಗಿದ್ದು, ಸೀಮಾ ಪ್ರದೇಶಗಳಲ್ಲಿ ತೀವ್ರ ನಿಗಾವಹಿಸಲಾಗಿದೆ. ಪಾಸ್‌ಪೋರ್ಟ್ ಪರಿಶೀಲನೆ, ವಾಹನ ತಪಾಸಣೆ ಹಾಗೂ ಭದ್ರತಾ ಬಲಗಳ ಗಸ್ತು ಸಹ ಹೆಚ್ಚಿಸಲಾಗಿದೆ.














