ದಾವಣಗೆರೆ : ಗೌತಮಬುದ್ಧ, ಬಸವಣ್ಣ, ಡಾ.ಬಿ.ಆರ್.ಅಂಬೇಡ್ಕರ್ ಈ ಮೂರು ರತ್ನತ್ರಯರ ಆದರ್ಶಗಳನ್ನು ಪಾಲಿಸಿದಾಗ ಜೀವನದ ಮೌಲ್ಯ ಹೆಚ್ಚುತ್ತದೆ ಎಂದು ಮಾಯಕೊಂಡ ಶಾಸಕರಾದ ಕೆ.ಎಸ್. ಬಸವಂತಪ್ಪ ಹೇಳಿದರು.
ಸೋಮವಾರ(ಮೇ.೧೨) ರಂದು ನಗರದ ಶ್ರೀರಾಮ ನಗರದಲ್ಲಿರುವ ಗಾಂಧಿಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಭಗವಾನ್ ಬುದ್ಧರ ಜಯಂತಿ ಕಾರ್ಯಕ್ರಮದಲ್ಲಿ ಬುದ್ಧನ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು. ಗೌತಮ ಬುದ್ಧರ ಜಯಂತಿಯನ್ನು ಸರ್ಕಾರದಿಂದ ಇದೇ ಪ್ರಥಮವಾಗಿ ಆಚರಣೆ ಮಾಡಲು ಅವಕಾಶ ಮಾಡಿಕೊಟ್ಟ ಸರ್ಕಾರಕ್ಕೆ ಅಭಿನಂದಿಸುತೇನೆ. ಬುದ್ಧನ ತತ್ವಾದರ್ಶಗಳಾದ ಆಸೆಯೇ ದುಃಖಕ್ಕೆ ಮೂಲ, ಅದನ್ನು ಇನ್ನೊಂದು ರೀತಿಯಲ್ಲಿ ಹೇಳುವುದಾದರೇ ದುರಾಸೆಯೇ ದುಃಖಕ್ಕೆ ಮೂಲ ಎಂದು ಹೇಳಬೇಕು.
ಬೌದ್ಧ ಧರ್ಮದ ಸಂಸ್ಥಾಪಕ ಗೌತಮ ಬುದ್ಧ ಮಹಾನ್ ದಾರ್ಶನಿಕ. ಇವರು ರಾಜವಂಶದ ಕುಡಿ ಸಕಲ ವೈಭೋಗವನ್ನು ತ್ಯಜಿಸಿ, ಜ್ಞಾನೋದಯ ಪಡೆದು ಗೌತಮ ಬುದ್ಧನಾಗುತ್ತಾನೆ, ಲೋಕಕ್ಕೆ ಶಾಂತಿ, ಅಹಿಂಸೆಯ ಮಹತ್ವವನ್ನು ತಿಳಿಸಿದರು. ಬುದ್ಧನ ಜನನ, ಮರಣ ಹಾಗೂ ಜ್ಞಾನೋದಯವನ್ನು ಸ್ಮರಿಸುವ ಉದ್ದೇಶದಿಂದ ಸರ್ಕಾರದಿಂದ ಈ ಆಚರಣೆಯನ್ನು ಮಾಡಲಾಗುತ್ತಿದೆ. ಬೌದ್ದಧರ್ಮದ ಮೂರು ಪ್ರಮುಖ ತತ್ವಗಳಾದ ಜ್ಞಾನೋದಯ, ಕರುಣೆ ಮತ್ತು ಶಾಂತಿಯನ್ನು ಪರಿಗಣಿಸಲು ಇದು ಒಂದು ದಿನ. ಈ ಐತಿಹಾಸಿಕ ಸಂದರ್ಭವು ಶಾಂತಿ ಮತ್ತು ಸಾಮರಸ್ಯವನ್ನು ಕಾಪಾಡುವ ಬುದ್ಧ ತತ್ವಗಳನ್ನು ಸ್ಮರಿಸುತ್ತದೆ ಎಂದರು.
ನಿವೃತ್ತ ಪ್ರಾಧ್ಯಾಪಕರಾದ ಗೋವಿಂದಪ್ಪ ಉಪನ್ಯಾಸ ನೀಡಿ ಉತ್ತರ ಭಾರತದಲ್ಲಿ, ಭಗವಾನ್ ಬುದ್ಧನು ಶ್ರೀಕೃಷ್ಣನ ಒಂಬತ್ತನೇ ಅವತಾರ ಮತ್ತು ವಿಷ್ಣುವಿನ ಎಂಟನೇ ಅವತಾರ ಎಂದು ಕೆಲವರು ನಂಬುತ್ತಾರೆ. ಬುದ್ಧನು ಹೋರಾಟಗಳನ್ನು ಕೊನೆಗೊಳಿಸುವ ಮಾರ್ಗಗಳನ್ನು ಕಂಡುಹಿಡಿದಿದ್ದ, ಬಿಹಾರದ ಬೋಧಗಯಾದಲ್ಲಿ ಮಹಾಬೋಧಿಮರದ ಕೆಳಗೆ ೪೯ ದಿನಗಳ ಧ್ಯಾನದ ನಂತರ ಜ್ಞಾನೋದಯವಾಯಿತು ಎಂದರು.
ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ, ದೂಡಾ ಅಧ್ಯಕ್ಷರಾದ ದಿನೇಶ್.ಕೆ.ಶೆಟ್ಟಿ, ಸಂಚಾಲಕರಾದ ಎ.ವಿ.ರಾಮಚಂದ್ರಪ್ಪ, ಡಿಎಸ್‌ಎಸ್ ಮುಖಂಡರಾದ ಮಲ್ಲೇಶ್, ಉಪವಿಭಾಗಾಧಿಕಾರಿ ಸಂತೋಷ್ ಪಾಟೀಲ್, ನಿವೃತ್ತ ಪೊಲೀಸ್ ಅಧಿಕಾರಿ ರುದ್ರಮುನಿ ಹಾಗೂ ರವಿನಾರಾಯಣ, ಆವರಗೆರೆ ರುದ್ರಮುನಿ ಉಪಸ್ಥಿತರಿದ್ದರು.














