ಮನೆ ರಾಜಕೀಯ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ: ಮತ ಎಣಿಕೆ ಆರಂಭ

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ: ಮತ ಎಣಿಕೆ ಆರಂಭ

0

ಮೈಸೂರು(Mysuru): ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಜಿಲ್ಲೆಗಳನ್ನು ಒಳಗೊಂಡ ದಕ್ಷಿಣ ಪದವೀಧರರ ‌ಕ್ಷೇತ್ರದ ಚುನಾವಣೆ ಮತ ಎಣಿಕೆ ಪ್ರಕ್ರಿಯೆಯು ನಗರದ ಮಹಾರಾಣಿ ವಾಣಿಜ್ಯ ಕಾಲೇಜಿನಲ್ಲಿ ಬುಧವಾರ ಆರಂಭವಾಗಿದೆ.

ಬೆಳಿಗ್ಗೆ 8ರಿಂದ ಪ್ರಕ್ರಿಯೆ ಆರಂಭವಾಗಿದ್ದು, ಅಧಿಕಾರಿಗಳ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಗಿದೆ. ಈ ಸಂದರ್ಭದಲ್ಲಿ ಚುನಾವಣಾಧಿಕಾರಿ ಡಾ.ಜಿ.ಸಿ.‌ಪ್ರಕಾಶ್, ಜೆಡಿಎಸ್ ಅಭ್ಯರ್ಥಿ ಎಚ್.ಕೆ.‌ ರಾಮು‌ ಮೊದಲಾದವರು ಇದ್ದರು.

ಮತಪೆಟ್ಟಿಗೆಗಳನ್ನು ತೆರೆದು ಮತಚೀಟಿಗಳನ್ನು ತಲಾ 25ರಂತೆ ಬಂಡಲ್‌ಗಳನ್ನು ಮಾಡಿ ನಂತರವಷ್ಟೆ ಎಣಿಕೆ ಆರಂಭವಾಗಲಿದೆ. ಈ ಪ್ರಕ್ರಿಯೆಯು ಮಧ್ಯಾಹ್ನದ ನಂತರ ಪ್ರಾರಂಭಗೊಳ್ಳುವ ಸಾಧ್ಯತೆ ಇದೆ. ಒಟ್ಟಾರೆ ಚಲಾವಣೆಯಾದ ಮತಗಳಲ್ಲಿ ಶೇ 51ರಷ್ಟು ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದವರನ್ನು ವಿಜೇತರೆಂದು ಘೋಷಿಸಲಾಗುವುದು.

ಇಲ್ಲದಿದ್ದರೆ ನಂತರದ ಹಂತವಾಗಿ ಎಲಿಮಿನೇಷನ್ ಪ್ರಕ್ರಿಯೆ ನಡೆಯಲಿದೆ.ಸೋಮವಾರ 150 ಮತಗಟ್ಟೆಗಳಲ್ಲಿ ನಡೆದ ಚುನಾವಣೆಯಲ್ಲಿ 1,41,963 ಮತದಾರರ ಪೈಕಿ 99,304 ಮತದಾರರು ಹಕ್ಕು ಚಲಾಯಿಸಿದ್ದರು. ಅಂದರೆ ಶೇ 69.95ರಷ್ಟು ಮತದಾನವಾಗಿದೆ. ಹೋದ ಚುನಾವಣೆಗಿಂತ ಶೇ 29ರಷ್ಟು ಹೆಚ್ಚಿನ ಮತದಾನವಾಗಿದೆ. ಹೀಗಾಗಿ, ಮತ ಎಣಿಕೆ ಪ್ರಕ್ರಿಯೆ ಪೂರ್ಣಗೊಳಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ನಾಲ್ಕು ಕೊಠಡಿಗಳಲ್ಲಿ 28 ಟೇಬಲ್‌ಗಳಲ್ಲಿ ಎಣಿಕೆ ಪ್ರಕ್ರಿಯೆ ನಡೆಯಲಿದೆ. 90 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮೇಲ್ವಿಚಾರಕರಾಗಿ 28 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಭದ್ರತೆಗಾಗಿ 158 ಪೊಲೀಸ್ ‌ಸಿಬ್ಬಂದಿ ನಿಯೋಜಿಸಲಾಗಿದೆ.ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಕಣದಲ್ಲಿರುವ ಅಭ್ಯರ್ಥಿಗಳು:

ಮೈ.ವಿ. ರವಿಶಂಕರ್ (ಬಿಜೆಪಿ), ಮಧು ಜಿ.ಮಾದೇಗೌಡ (ಕಾಂಗ್ರೆಸ್‌), ಎಚ್‌.ಕೆ.ರಾಮು (ಜೆಡಿಎಸ್‌), ರಫತ್‌ ಉಲ್ಲಾ ಖಾನ್‌ (ಎಸ್‌ಡಿಪಿಐ), ವಾಟಾಳ್‌ ನಾಗರಾಜ್ (ಕನ್ನಡ ಚಳವಳಿ ವಾಟಾಳ್‌ ಪಕ್ಷ) ಮತ್ತು ಎನ್‌.ವೀರಭದ್ರಸ್ವಾಮಿ (ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ), ಡಾ.ಬಿ.ಎಚ್‌. ಚನ್ನಕೇಶವಮೂರ್ತಿ, ಡಾ.ಜೆ. ಅರುಣ್‌ಕುಮಾರ್, ಸಿ.ಕಾವ್ಯಶ್ರೀ, ಪುಟ್ಟಸ್ವಾಮಿ, ಎನ್. ಪ್ರಸನ್ನ ಗೌಡ (ರೈತ- ದಲಿತ ಚಳವಳಿ ಬೆಂಬಲಿತ), ಕೆ.ಪಿ. ಪ್ರಸನ್ನಕುಮಾರ್, ಎಂ.ಮಹೇಶ್, ಡಾ.ಜೆ.ಸಿ. ರವೀಂದ್ರ, ಎಸ್.ರಾಮು, ಎನ್. ರಾಜೇಂದ್ರಸಿಂಗ್ ಬಾಬು, ಎನ್.ಎಸ್. ವಿನಯ್, ಎಚ್‌.ಎಲ್. ವೆಂಕಟೇಶ ಮತ್ತು ಎಚ್‌.ಪಿ. ಸುಜಾತಾ (ಪಕ್ಷೇತರರು).