ಮನೆ ಸ್ಥಳೀಯ ಶಾಸಕರಿಗೆ ₹8,000 ಕೋಟಿ, ಅಭಿವೃದ್ಧಿಗೆ ₹80 ಸಾವಿರ ಕೋಟಿ ಮೀಸಲು : ಸಿಎಂ ಸಿದ್ದರಾಮಯ್ಯ

ಶಾಸಕರಿಗೆ ₹8,000 ಕೋಟಿ, ಅಭಿವೃದ್ಧಿಗೆ ₹80 ಸಾವಿರ ಕೋಟಿ ಮೀಸಲು : ಸಿಎಂ ಸಿದ್ದರಾಮಯ್ಯ

0

ಮೈಸೂರು : ರಾಜ್ಯದ ಅಭಿವೃದ್ಧಿಯ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ಬಾರಿಯ ಬಜೆಟ್‌ನಲ್ಲಿ ಶಾಸಕರಿಗೆ ₹8,000 ಕೋಟಿ ಅನುದಾನವನ್ನು ಹಾಗೂ ಸಾವಿರಾರು ಕೋಟಿ ಹಣವನ್ನು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಟ್ಟಿರುವುದಾಗಿ ಘೋಷಿಸಿದರು. ಮೈಸೂರಿನ ಹೆಚ್.ಡಿ. ಕೋಟೆಯಲ್ಲಿ ಅಂಬೇಡ್ಕರ್ ಜಯಂತಿ ಹಾಗೂ ವಿವಿಧ ಇಲಾಖೆಗಳ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಸಂದರ್ಭದಲ್ಲಿ ಅವರು ಮಾತನಾಡಿದರು.

ಸಿಎಂ ಸಿದ್ದರಾಮಯ್ಯ ಅವರ ಪ್ರಕಾರ, ರಾಜ್ಯದ ಗ್ಯಾರಂಟಿ ಯೋಜನೆಗಳಿಗೆ ₹55,000 ಕೋಟಿ ಹಣವನ್ನು ಮೀಸಲಿಟ್ಟು, ₹80,000 ಕೋಟಿ ಬಂಡವಾಳ ವೆಚ್ಚದ ಯೋಜನೆಗಳನ್ನು ರೂಪಿಸಲಾಗಿದೆ. “ರಾಜ್ಯ ಸರ್ಕಾರದ ಬಳಿ ಹಣವಿಲ್ಲ ಎಂಬ ಆರೋಪವನ್ನು ಬಿಜೆಪಿ ಸುಳ್ಳಾಗಿ ಪ್ರಚಾರ ಮಾಡುತ್ತಿದೆ. ಆದರೆ ಒಂದೇ ದಿನ 140 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಕಾರ್ಯಗಳನ್ನು ಹೆಚ್.ಡಿ. ಕೋಟೆಯಲ್ಲಿ ಆರಂಭಿಸಿದ್ದೇವೆ” ಎಂದು ಅವರು ಹೇಳಿದರು.

ಸಿದ್ಧರಾಮಯ್ಯ ಅವರು ತಮ್ಮ ಭಾಷಣದಲ್ಲಿ ಸಮಾಜದ ಸಮಾನತೆಯ ಆಶಯವನ್ನು ಮುಂದಿಟ್ಟುಕೊಂಡು, ಬಸವ, ಬುದ್ಧ, ಅಂಬೇಡ್ಕರ್, ಗಾಂಧಿಜಿ ಮತ್ತು ಸಂವಿಧಾನದ ಆದರ್ಶಗಳ ಅಡಿಯಲ್ಲಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಸ್ಪಷ್ಟಪಡಿಸಿದರು. “ಪ್ರಾಣಿಗಳನ್ನು ಪ್ರೀತಿಸುವುದು ಸರಿಯೇ ಸರಿ, ಆದರೆ ಮನುಷ್ಯರನ್ನು ಜಾತಿ-ಧರ್ಮದ ಹೆಸರಿನಲ್ಲಿ ತಿರಸ್ಕರಿಸುವುದು ತೀವ್ರವಾಗಿ ಖಂಡನೀಯ” ಎಂದು ಹೇಳಿದರು.

ಒಳ ಮೀಸಲಾತಿಗೆ ಸಂಬಂಧಿಸಿದ ಗೊಂದಲಗಳನ್ನು ನಿವಾರಿಸಲು ನಾಗಮೋಹನ್ ದಾಸ್ ಸಮಿತಿಯನ್ನು ರಚಿಸಿರುವುದಾಗಿ ಅವರು ತಿಳಿಸಿದರು. ಸಮಿತಿ ಶಿಫಾರಸ್ಸಿನಂತೆ ಮೂರು ಹಂತಗಳಲ್ಲಿ ಸಮೀಕ್ಷೆ ನಡೆಯುತ್ತಿದೆ. ಈ ಸಮೀಕ್ಷೆಯಿಂದ ಒಳ ಮೀಸಲಾತಿಯ ಸಮಸ್ಯೆಗಳಿಗೆ ಪರಿಹಾರ ಸಿಗುವ ನಿರೀಕ್ಷೆ ವ್ಯಕ್ತಪಡಿಸಿದರು.

ಅಂಬೇಡ್ಕರ್ ಅವರು ಮೀಸಲಾತಿ ಕೊಡದೇ ಹೋಗಿದ್ದರೆ ನಾವು ಮನುಷ್ಯರಾಗಲು ಸಾಧ್ಯವೇ ಇರಲಿಲ್ಲ. ನಾನು ಮುಖ್ಯಮಂತ್ರಿಯೂ ಆಗುತ್ತಿರಲಿಲ್ಲ . ಶತ ಶತಮಾನಗಳ ಕಾಲ ಶೂದ್ರ ಸಮುದಾಯವನ್ನು ಶಿಕ್ಷಣದಿಂದ ದೂರ ಇಡಲಾಗಿತ್ತು. ಸಂವಿಧಾನದ ಕಾರಣದಿಂದ ಶಿಕ್ಷಣ ಪಡೆದು ಮುಖ್ಯಮಂತ್ರಿ ಆದೆ, ಇಲ್ಲದಿದ್ದರೆ ಕುರಿನೊ, ಎಮ್ಮೆನೊ ಕಾಯ್ಕಂಡು ಇರಬೇಕಿತ್ತು.

ರಾಜ್ಯ ಸರ್ಕಾರದ ಬಳಿ ಅಭಿವೃದ್ಧಿಗೆ ಹಣ ಇಲ್ಲ ಎಂದು ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ. ಇಂದು ಒಂದೇ ದಿನ 140 ಕೋಟಿ ಅಭಿವೃದ್ಧಿ ಕಾರ್ಯಗಳನ್ನು ಹೆಚ್.ಡಿ.ಕೋಟೆ ಜನಕ್ಕೆ ಅರ್ಪಿಸಿದ್ದೇವೆ. ಬಿಜೆಪಿಯವರಿಗೆ ಮಾನ ಮರ್ಯಾದೆ ಇಲ್ಲ. ಅವರು ಸುಳ್ಳು ಹೇಳ್ತಾರೆ, ನೀವು ನಂಬ್ತೀರಿ. ಈ ಬಾರಿ ₹8,000 ಕೋಟಿ ಶಾಸಕರ ಅನುದಾನ, ಸಾವಿರಾರು ಕೋಟಿ ಹಣ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಟ್ಟಿದ್ದೇವೆ. 55 ಸಾವಿರ ಕೋಟಿ ಗ್ಯಾರಂಟಿ ಯೋಜನೆಗಳಿಗೆ ತೆಗೆದಿರಿಸಿದ್ದೀವಿ. 80 ಸಾವಿರ ಕೋಟಿ ಬಂಡವಾಳ ವೆಚ್ಚಕ್ಕೆ ಮೀಸಲಿರಿಸಿಟ್ಟೇವೆ. ಈ ಹಣ ಎಲ್ಲಿಂದ ಬಂತು?

ಬಿಜೆಪಿಯವರು ಸತ್ಯದ ತಲೆ ಮೇಲೆ ಹೊಡೆದಂತೆ ಸುಳ್ಳು ಹೇಳ್ತಾರೆ. ಹಾಲಿನ ದರ 4ರೂ ಹೆಚ್ಚು ಮಾಡಿ ಇದರಲ್ಲಿ ಒಂದೂ ರೂಪಾಯಿಯನ್ನೂ ನಾವು ಇಟ್ಟುಕೊಳ್ಳದೆ ಅಷ್ಟನ್ನೂ ರೈತರಿಗೆ, ಗೋಸಾಕಾಣಿಕೆದಾರರಿಗೆ ವರ್ಗಾಯಿಸಿದ್ದೇವೆ. ಆದರೆ ಬಿಜೆಪಿ ಚಿನ್ನ, ಬೆಳ್ಳಿ, ಡೀಸೆಲ್, ಪೆಟ್ರೋಲ್ , ಅಡುಗೆ ಅನಿಲ, ಬೇಳೆ, ಗೊಬ್ಬರ, ಎಣ್ಣೆ ಕಾಳು ಸೇರಿ ಎಲ್ಲದರ ಬೆಲೆ ಹೆಚ್ಚಿಸಿದ್ದು ಕೇಂದ್ರದ ಬಿಜೆಪಿ ಸರ್ಕಾರ. ಆದ್ದರಿಂದ ಜನಾಕ್ರೋಶ ಇರುವುದು ಬಿಜೆಪಿ ಸರ್ಕಾರದ ಮೋದಿಯವರ ವಿರುದ್ಧವೇ ಹೊರತು ನಮ್ಮ ಸರ್ಕಾರದ ಮೇಲಲ್ಲ ಎಂದು ತಿಳಿಸಿದರು.