ಬೀದರ್: ಬೀದರ್ ಜಿಲ್ಲೆಯಲ್ಲಿ ಭಾರೀ ವಿಷಾದಕರ ಘಟನೆ ಸಂಭವಿಸಿದ್ದು, ವಿದ್ಯುತ್ ಶಾಕ್ನಿಂದ 8ನೇ ತರಗತಿ ಓದುತ್ತಿದ್ದ ಬಾಲಕಿ ಮೃತಪಟ್ಟಿದ್ದಾಳೆ. ಈ ದುರ್ಘಟನೆ ಹುಲಸೂರ ತಾಲ್ಲೂಕಿನ ತೋಗಲೂರ ಗ್ರಾಮದಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.
ಮೃತ ಬಾಲಕಿಯನ್ನು ಪಲ್ಲವಿ ರಾಜೇಂದ್ರ ದೇವಗೊಂಡ (15) ಎಂದು ಗುರುತಿಸಲಾಗಿದೆ. ಮನೆಯ ನಿರ್ಮಾಣ ಪ್ರಕ್ರಿಯೆ ನಡೆಯುತ್ತಿರುವಾಗ, ಪ್ಲಾಸ್ಟರ್ ಕೆಲಸಕ್ಕೆ ಬೇಕಾದ ನೀರನ್ನು ಪೂರೈಸಲು ಪಂಪ್ ಸೆಟ್ ಆನ್ ಮಾಡಲು ಹೋದ ವೇಳೆ ಈ ದುರಂತ ಸಂಭವಿಸಿದೆ. ಮೋಟರ್ನಲ್ಲಿ ಇದ್ದ ವಿದ್ಯುತ್ ಲೀಕೇಜ್ ಬಾಲಕಿಗೆ ತಗುಲಿ ತಕ್ಷಣ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಲ್ಲವಿ ಸೋಮವಾರ ಬೆಳಗ್ಗೆ ತನ್ನ ಮನೆಯ ನಿರ್ಮಾಣಕ್ಕೆ ನೀರು ಹಾಕಲು ಪಂಪ್ ಸೆಟ್ ಆನ್ ಮಾಡಲು ಹೊರಟಿದ್ದಳು. ನೀರಿನ ಮೋಟರ್ ಅನ್ನು ಆನ್ ಮಾಡುವಾಗ ಕೈಗೆ ತಗುಲಿದ ವಿದ್ಯುತ್ ಆಘಾತದಿಂದ ಆಕೆ ಕಿತ್ತುಕೊಳ್ಳದೇ ತಕ್ಷಣವೇ ಬಿದ್ದಿದ್ದಾಳೆ. ಸ್ಥಳೀಯರು ಕೂಡಲೇ ಅವಳನ್ನು ರಕ್ಷಿಸಲು ಮುಂದಾಗಿದ್ದರೂ, ಆಗಲೇ ಉಸಿರು ನಿಂತಿದ್ದು ಎಂದು ಹೇಳಲಾಗಿದೆ.
ಈ ಕುರಿತು ಹುಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ವಿದ್ಯುತ್ ಸುರಕ್ಷತೆಗಿಲ್ಲದ ವ್ಯವಸ್ಥೆ, ಕೇಬಲ್ ಲೀಕೇಜ್ ಅಥವಾ ಯಾವುದೇ ನಿರ್ಲಕ್ಷ್ಯ ದುರಂತಕ್ಕೆ ಕಾರಣವಾಯಿತೇ ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ.














