ಮನೆ ಸುದ್ದಿ ಜಾಲ ಕಲಬುರಗಿ : ಜಿಮ್ಸ್ ಆಸ್ಪತ್ರೆಯ ಲಿಫ್ಟ್ ನಲ್ಲಿ ಸಿಲುಕಿಕೊಂಡಿದ್ದ 8 ಮಂದಿ ಸಿಬ್ಬಂದಿಯ ರಕ್ಷಣೆ!

ಕಲಬುರಗಿ : ಜಿಮ್ಸ್ ಆಸ್ಪತ್ರೆಯ ಲಿಫ್ಟ್ ನಲ್ಲಿ ಸಿಲುಕಿಕೊಂಡಿದ್ದ 8 ಮಂದಿ ಸಿಬ್ಬಂದಿಯ ರಕ್ಷಣೆ!

0

ಕಲಬುರಗಿ : ಕಲಬುರಗಿಯ ಜಿಮ್ಸ್ ಆಸ್ಪತ್ರೆ ಒಂದಲ್ಲ ಒಂದು ಯಡವಟ್ಟಿನಿಂದ ಕರ್ನಾಟಕದಾದ್ಯಂತ ಸುದ್ದಿಯಾಗುತ್ತಲೇ ಇದೆ.‌ ಇದೀಗ ಮತ್ತೆ ಆಸ್ಪತ್ರೆಯಲ್ಲಿ ಯಡವಟ್ಟು ಸಂಭವಿಸಿದೆ. ಆಸ್ಪತ್ರೆಯ ಮೂರನೇ ಮಹಡಿಯಲ್ಲಿ‌ ಇಂದು ಬೆಳಿಗ್ಗೆ 9 ಗಂಟೆಗೆ ಏಕಾ ಏಕಿ ಲಿಫ್ಟ್ ಕೈ ಕೊಟ್ಟಿದೆ. ಇದರ ಪರಿಣಾಮ ಲಿಫ್ಟ್ ಒಳಗಡೆ ಇದ್ದ 8 ಜನ ಸಿಬ್ಬಂದಿ ಉಸಿರಾಡಲು ಪರದಾಡುವಂತಾಯಿತು. ಹೊರಗಡೆ ಬರಲಾಗದೆ ಕಂಗಾಲಾಗಿದ್ದರು. ತಕ್ಷಣವೇ ಲಿಫ್ಟ್​ನಲ್ಲಿದ್ದ ಒರ್ವ ಸಿಬ್ಬಂದಿ ತಾಂತ್ರಿಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ‌‌. ತಕ್ಷಣವೇ ಲಿಫ್ಟ್​​ನಲ್ಲಿ ಸಿಲುಕಿದ 8 ಮಂದಿಯ ರಕ್ಷಣೆಗಾಗಿ ಸಿಬ್ಬಂದಿ ಮುಂದಾಗಿದ್ದಾರೆ. ಆದರೆ ತಡೆ ಗೋಡೆ ಇರುವ ಕಡೆ ಲಿಫ್ಟ್ ಸಿಲುಕಿದ ಪರಿಣಾಮ ಒಳಗಿನವರನ್ನು ರಕ್ಷಣೆ ಮಾಡಲು ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.

ಕೊನೆಗೂ ಲಿಫ್ಟ್ ದುರಸ್ತಿ ಆಗದ ಆಗದ ಕಾರಣ ಡ್ರಿಲ್ಲಿಂಗ್ ಮಷಿನ್ ಬಳಸಿ ಬಳಿ ಇದ್ದ ತಡೆಗೋಡೆಯನ್ನು ಒಡೆದು ಲಿಫ್ಟ್ ಒಳಗಿದ್ದವರನ್ನು ರಕ್ಷಿಸಲಾಯಿತು.

ಕೆಟ್ಟು ಹೋಗಿರುವ ಲಿಫ್ಟ್​ ಇರುವ‌ ಈ ಕಟ್ಟಡವನ್ನು ಈ ಹಿಂದೆ ಜಯದೇವ ಆಸ್ಪತ್ರೆಯವರು ಬಳಸುತ್ತಿದ್ದರು. ಹೀಗಾಗಿ ಜಿಮ್ಸ್ ಆಸ್ಪತ್ರೆಯ ರೋಗಿಗಳು ಹಾಗೂ ಸಿಬ್ಬಂದಿ ಬರಬಾರದು ಎಂಬುದಕ್ಕಾಗಿ ಲಿಫ್ಟ್​ ಅನ್ನು ಮೂರನೇ ಅಂತಸ್ತಿನಲ್ಲಿ ನಿಲ್ಲದಂತೆ ಮಾಡಲು ಗೋಡೆ ಕಟ್ಟಲಾಗಿತ್ತು. ದುರಂತ ಎಂದರೆ, ಅದೇ ಮೂರನೇ ಮಹಡಿಯ ವಾಲ್ ಡೋರ್ ಬಳಿಯೇ ಲಿಫ್ಟ್ ಕೆಟ್ಟು ನಿಂತಿದೆ. ಲಿಫ್ಟ್ ಕೆಟ್ಟು ನಿಂತಾಗ 10 ರಿಂದ 15 ನಿಮಿಷಗಳಲ್ಲಿ ದುರಸ್ತಿ ಆಗಬಹುದು ಎಂದು ಭಾವಿಸಿ ಸಿಬ್ಬಂದಿ ಹಾಗೆಯೇ ಅದರೊಳಗಡೆ ನಿಂತಿದ್ದಾರೆ. ಆದರೆ, ಲಿಫ್ಟ್ ರಿಪೇರಿ ಆಗುವ ಸುಳಿವೇ ದೊರೆಯದೇ ಇದ್ದಾಗ 8 ಜನ ಸೇರಿ ಲಿಫ್ಟ್ ಬಾಗಿಲನ್ನು ಬಲವಂತದಿಂದ ಎಳೆದು ತೆಗೆದಿದ್ದಾರೆ. ಆದರೆ ಬಾಗಿಲು ತೆರೆಯುತ್ತಿದ್ದಂತೆಯೇ ಎದುರಿಗೆ ದೊಡ್ಡ ಗೋಡೆ ಕಾಣಿಸಿದೆ. ಬಳಿಕ ಎಲ್ಲಾ ಸಿಬ್ಬಂದಿ ಕಿರಚಾಟ ಆರಂಭಿಸಿದ್ದಾರೆ. ಅದಾದ ಒಂದೂವರೆ ಗಂಟೆ ಬಳಿಕ ಡ್ರೀಲ್ ಮಷಿನ್​ನಿಂದ ಗೋಡೆ ಒಡೆದು ಎಲ್ಲರನ್ನೂ ರಕ್ಷಿಸಲಾಗಿದೆ‌. ಅಲ್ಲದೇ ಲಿಫ್ಟ್​​ನಲ್ಲಿ ತಾಂತ್ರಿಕದೋಷವಾಗಿರುವುದರಿಂದ ತಕ್ಷಣವೇ ಎಚ್ಚತ್ತುಕೊಂಡು ಎಲ್ಲರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ್ದೇವೆ ಎಂದು‌ ಜಿಮ್ಸ್ ಆಸ್ಪತ್ರೆಯ ಮೆಡಿಕಲ್ ಸುಪರಿಡೆಂಟ್ ಡಾ.ಶಿವಕುಮಾರ ತಿಳಿಸಿದ್ದಾರೆ. ಇನ್ನಾದರೂ ಜಿಮ್ಸ್ ಅಧಿಕಾರಿಗಳು ಎಚ್ಚೆತ್ತು ಪುನಃ ಇಂತಹ ಘಟನೆಗಳಾಗದಂತೆ ಮುನ್ನೆಚ್ಚರಿಕೆ ವಹಿಸಬೇಕಿದೆ.