ಐಪಿಎಲ್ 2025: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಪುನರಾರಂಭಕ್ಕೆ ದಿನಾಂಕ ಫಿಕ್ಸ್ ಆಗಿದೆ. ಅದರಂತೆ ಮೇ 17 ರಿಂದ ಐಪಿಎಲ್ ಮತ್ತೆ ಶುರುವಾಗಲಿದೆ. ಶನಿವಾರ ನಡೆಯಲಿರುವ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯಕ್ಕೆ ಆರ್ಸಿಬಿ ತಂಡದ ಇಬ್ಬರು ಅಲಭ್ಯರಾಗಿರುವುದು ಖಚಿತವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಎಡಗೈ ದಾಂಡಿಗ ದೇವದತ್ ಪಡಿಕ್ಕಲ್ ಗಾಯಗೊಂಡಿದ್ದು, ಹೀಗಾಗಿ ಮುಂದಿನ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಅಲ್ಲದೆ ಅವರ ಬದಲಿಗೆ ಇದೀಗ ತಂಡಕ್ಕೆ ಕರ್ನಾಟಕದ ಬಲಗೈ ಬ್ಯಾಟರ್ ಮಯಾಂಕ್ ಅಗರ್ವಾಲ್ ಆಯ್ಕೆಯಾಗಿದ್ದಾರೆ.
ಇನ್ನು ಭುಜದ ನೋವಿನಿಂದ ಬಳಲುತ್ತಿರುವ ಜೋಶ್ ಹೇಝಲ್ವುಡ್ ಕೂಡ ಆರ್ಸಿಬಿ ತಂಡದ ಉಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಹೀಗಾಗಿ ಆಸ್ಟ್ರೇಲಿಯಾ ವೇಗಿ ಕೂಡ ಪ್ಲೇಆಫ್ ಸುತ್ತಿನಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ.
ಹಾಗೆಯೇ ಆರ್ಸಿಬಿ ತಂಡದ ಆರಂಭಿಕ ದಾಂಡಿಗ ಜೇಕಬ್ ಬೆಥೆಲ್ ಕೂಡ ಪ್ಲೇಆಫ್ ಪಂದ್ಯದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿಲ್ಲ. ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಇಂಗ್ಲೆಂಡ್ ತಂಡದಲ್ಲಿ ಬೆಥೆಲ್ ಸ್ಥಾನ ಪಡೆದಿದ್ದಾರೆ. ಹೀಗಾಗಿ ಅವರು ಕೂಡ ಕೆಕೆಆರ್ ಹಾಗೂ ಎಸ್ಆರ್ಹೆಚ್ ವಿರುದ್ಧದ ಪಂದ್ಯಗಳ ಬಳಿಕ ತವರಿಗೆ ಹಿಂತಿರುಗಲಿದ್ದಾರೆ.
ಇನ್ನು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ತಂಡದ ಭಾಗವಾಗಿರುವ ಸೌತ್ ಆಫ್ರಿಕಾ ವೇಗಿ ಲುಂಗಿ ಎನ್ಗಿಡಿ ಕೂಡ ಮೇ 25 ರಂದು ತವರಿಗೆ ಮರಳಲಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಆರ್ಸಿಬಿ ತಂಡವು ಪ್ಲೇಆಫ್ ಪ್ರವೇಶಿಸಿದರೆ ಲುಂಗಿ ಎನ್ಗಿಡಿ ಕೂಡ ಕಾಣಿಸಿಕೊಳ್ಳುವುದಿಲ್ಲ.
ಮತ್ತೊಂದೆಡೆ ರೊಮಾರಿಯೊ ಶೆಫರ್ಡ್ ವೆಸ್ಟ್ ಇಂಡೀಸ್ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನಡುವಣ ಏಕದಿನ ಸರಣಿ ಮೇ 29 ರಿಂದ ಶುರುವಾಗಲಿದೆ. ಹೀಗಾಗಿ ರೊಮಾರಿಯೊ ಶೆಫರ್ಡ್ ಕೂಡ ಪ್ಲೇಅಫ್ ಪಂದ್ಯಕ್ಕೂ ಮುನ್ನವೇ ಆರ್ಸಿಬಿ ತಂಡವನ್ನು ತೊರೆಯಲಿದ್ದಾರೆ ಎಂದು ವರದಿಯಾಗಿದೆ.
ಒಟ್ಟಿನಲ್ಲಿ ಪ್ಲೇಆಫ್ ಸುತ್ತಿಗೆ ಪ್ರವೇಶಿಸುವ ಹಂತದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಇದೀಗ ಪ್ರಮುಖ ಆಟಗಾರರ ಅಲಭ್ಯತೆಯೇ ದೊಡ್ಡ ಚಿಂತೆ. ಏಕೆಂದರೆ ಪ್ಲೇಆಫ್ ಪಂದ್ಯಗಳು ಮೇ 29 ರಿಂದ ಶುರುವಾಗಲಿದ್ದು, ಈ ಪಂದ್ಯಗಳಿಗೆ ಆರ್ಸಿಬಿ ತಂಡದ ಐವರು ಆಟಗಾರರು ಅಲಭ್ಯರಾಗುವುದು ಬಹುತೇಕ ಖಚಿತವಾಗಿದೆ. ಈ ಐವರ ಅನುಪಸ್ಥಿತಿ ನಡುವೆಯೂ ಭರ್ಜರಿ ಪ್ರದರ್ಶನ ನೀಡಿ ಈ ಬಾರಿ ಆರ್ಸಿಬಿ ಕಪ್ ಗೆಲ್ಲಲಿದೆಯಾ ಕಾದು ನೋಡಬೇಕಿದೆ.















